×
Ad

ಉಡುಪಿಗೆ ಒಂದು ತಿಂಗಳ ನೀರಿನ ಕೊರತೆ ಸಾಧ್ಯತೆ: ಪ್ರಮೋದ್

Update: 2017-02-16 20:48 IST

ಬಜೆ (ಹಿರಿಯಡ್ಕ), ಫೆ.16: ಉಡುಪಿ ನಗರಸಭಾ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಮಾಡುವ ಬಜೆ ಅಣೆಕಟ್ಟಿನಲ್ಲಿ ಈ ಬಾರಿ ಸಂಗ್ರಹಿತ ಕುಡಿಯುವ ನೀರಿನ ಮಟ್ಟ ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದರೆ 0.32ಮೀ. ಕಡಿಮೆ ಇದ್ದು, ಶಿರೂರಿನಿಂದ ನೀರಿನ ಒಳ ಹರಿವು ಸಂಪೂರ್ಣ ನಿಂತಿದೆ. ಈಗ ಇರುವ ನೀರು ಎಪ್ರಿಲ್ ತಿಂಗಳ ಕೊನೆಯವರೆಗೆ ಬರುವ ನಿರೀಕ್ಷೆ ಇದ್ದು, ಇದರಿಂದ ಮೇ ತಿಂಗಳು ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಹಿರಿಯಡ್ಕ ಸಮೀಪದಲ್ಲಿರುವ ಬಜೆಯಲ್ಲಿ ಸ್ವರ್ಣ ನದಿಗೆ ಕಟ್ಟಲಾಗಿರುವ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿ, ನೀರಿನ ಲಭ್ಯತೆಯ ಕುರಿತು ವಿವರಗಳನ್ನು ಅಧಿಕಾರಿಗಳಿಂದ ಪಡೆದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.

ಈಗಿನ ಲೆಕ್ಕಾಚಾರದಂತೆ ಈಗ ಶಿರೂರಿನ ಅಣೆಕಟ್ಟಿನಿಂದ ಬಜೆಯವರೆಗೆ ಇರುವ ನೀರಿನ ಪ್ರಮಾಣ, ಎರ್ಲಪಾಡಿಯಲ್ಲಿ ಲಭ್ಯವಿರುವ ನೀರು, ಶಿರೂರು ಬಳಿ ಅಲ್ಲಲ್ಲಿ ದೊಡ್ಡ ಹೊಂಡಗಳಲ್ಲ ಸಂಗ್ರಹವಾಗಿರುವ ನೀರನ್ನು ಪಂಪಿಂಗ್ ಮಾಡಿ ಬಜೆಗೆ ಕಳುಹಿಸಿದರೆ, ಎಪ್ರಿಲ್‌ವರೆಗೆ ಉಡುಪಿ ಜನತೆಗೆ ನೀರು ನೀಡಲು ಸಾಧ್ಯವಿದೆ ಎಂದರು.

ಆ ಬಳಿಕ ಮಳೆಗಾಲ ಪ್ರಾರಂಭಗೊಳ್ಳುವ ಜೂನ್‌ವರೆಗಿನ ಒಂದು ತಿಂಗಳು ನೀರಿಗೆ ಕೊರತೆ ಎದುರಾಗಲಿದ್ದು, ಇದಕ್ಕಾಗಿ ಈ ಅವಧಿಗೆ ನೀರನ್ನು ನೀಡಲು ಈಗಲೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಇದಕ್ಕಾಗಿ ನೀರಿನ ರೇಷನಿಂಗ್‌ನ್ನು ಕೂಡಲೇ ಪ್ರಾರಂಭಿಸಬೇಕಾಗಿದೆ ಎಂದ ಸಚಿವರು, ನಗರಸಭೆಯ ಅಧ್ಯಕ್ಷೆ ಹಾಗೂ ಅಧಿಕಾರಿಗಳು ಚರ್ಚಿಸಿ ಯಾವತ್ತಿನಿಂದ ನೀರಿನ ರೇಷನಿಂಗ್ ಪ್ರಾರಂಭಿಸಬೇಕು ಹಾಗೂ ಯಾವ ರೀತಿ ಎಂಬುದನ್ನು ನಿರ್ಧರಿಸಲಿದ್ದಾರೆ ಎಂದರು.

ಎಪ್ರಿಲ್-ಮೇ ತಿಂಗಳಲ್ಲಿ ಚೆನ್ನಾಗಿ ಮಳೆ ಬಂದರೆ ನೀರಿನ ಸಮಸ್ಯೆ ಬಗೆಹರಿಯಬಹುದು. ಇಲ್ಲದಿದ್ದರೆ ನಗರಸಭೆ ವ್ಯಾಪ್ತಿಯಲ್ಲಿ ಹಾಗೂ ಗ್ರಾಪಂಗಳಿಗೆ ನೀರನ್ನು ನೀಡಲು ಈಗಲೇ ಸನ್ನದ್ಧರಾಗಬೇಕಿದೆ. ಅದಕ್ಕೆ ಬೇಕಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದರು.

ಈ ಬಗ್ಗೆ ಇದುವರೆಗೆ ನಗರಸಭೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಶೀಘ್ರವೇ ಅಧಿಕಾರಿಗಳು, ಇಂಜಿನಿಯರ್‌ಗಳೊಂದಿಗೆ ಚರ್ಚಿಸಿ ದಿನದ ಇಷ್ಟು ಗಂಟೆ ಅಥವಾ ದಿನ ಬಿಟ್ಟು ದಿನ ನೀರು ಕೊಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ತಿಳಿಸಿದರು.

ಶೀಂಬ್ರದಲ್ಲಿ ಅಣೆಕಟ್ಟು: ಇದರೊಂದಿಗೆ ಉಡುಪಿ ನಗರಸಭೆಗೆ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕುಡ್ಸೆಂಪ್ ನೆರವಿನಿಂದ 102 ಕೋಟಿ ರೂ. ವೆಚ್ಚದಲ್ಲಿ ಶೀಂಬ್ರದಲ್ಲಿ ಅಣೆಕಟ್ಟು ಕಟ್ಟಲು ಯೋಜನೆ ರೂಪಿಸಲಾಗಿದೆ. ಇದರೊಂದಿಗೆ ನೀರು ಸರಬರಾಜು ಪೈಪ್‌ನ ದುರಸ್ತಿ, ನಗರದ ಎಂಟು ಕಡೆ ಓವರ್‌ಹೆಡ್ ಟ್ಯಾಂಕ್‌ಗಳ ನಿರ್ಮಾಣ, ಬಜೆಯಲ್ಲಿ ಮೋಟಾರುಗಳ ಪಂಪಿಂಗ್ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ನಗರದ ಜನತೆಗೆ ಪ್ರತಿವರ್ಷ ಕಾಡುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಶಲಾಗುವುದು ಎಂದರು.

ಇದರೊಂದಿಗೆ ಬಜೆ ಅಣೆಕಟ್ಟಿನ ಪಂಪಿಂಗ್ ಸ್ಟೇಶನ್‌ಗೆ ದಿನದ 24 ಗಂಟೆಯೂ ನಿರಂತರ ವಿದ್ಯುತ್ ಸಂಪರ್ಕ ಇರುವಂತೆ ಮಾಡಲು ಸಹ ಕ್ರಮಕೈಗೊಳ್ಳಲಾಗಿದೆ. ಅದಕ್ಕಿರುವ ಹಿರಿಯಡ್ಕ ಲೈನ್‌ನೊಂದಿಗೆ, ಅಗತ್ಯ ಬಿದ್ದಾಗ ಮಣಿಪಾಲದಿಂದ ಎಕ್ಸ್‌ಪ್ರೆಸ್ ಪವರ್ ಕಾರಿಡಾರ್ ಮೂಲಕ ಸಂಪರ್ಕ ಕಲ್ಪಿಸಿ ವಿದ್ಯುತ್ ಕಡಿತವಾಗದಂತೆ ನೋಡಿಕೊಳ್ಳಲಾಗುವುದು. ಆಗ ನೀರು ನಿರಂತರವಾಗಿ ಪಂಪಿಂಗ್ ಮಾಡಲು ಸಾಧ್ಯವಾಗಲಿದೆ ಎಂದು ಪ್ರಮೋದ್ ತಿಳಿಸಿದರು.

ಬಜೆಯಿಂದ ಕೆಳಗೆ ಮಣಿಪಾಲ ಎಂಡ್‌ಪಾಯಿಂಟ್ ಬಳಿ ಶೀಂಬ್ರದಲ್ಲಿ ಮೂರನೇ ಅಣೆಕಟ್ಟು ಕಟ್ಟಲು ಕುಡ್ಸೆಂಪ್ ತಜ್ಞರಿಂದ ಹೈಡ್ರಾಲಿಕ್ ಪರೀಕ್ಷೆ ನಡೆಸುತ್ತಿದೆ. ಅದರ ವರದಿ ಬಂದ ನಂತರ ಡಿಪಿಆರ್ ಮಾಡಿ ಮುಂದಿನ ಪ್ರಕ್ರಿಯೆ ನಡೆಸಲಾಗುವುದು ಎಂದರು.

 ಇದರೊಂದಿಗೆ ನೀರಿನ ಪೈಪ್‌ಲೈನ್‌ಗಳ ದುರಸ್ತಿ, ಹಾಳಾದ ನೀರಿನ ಮೀಟರ್‌ಗಳ ಬದಲಾವಣೆ, ನೀರಿನ ದುರ್ಬಳಕೆ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ 550ಕ್ಕೂ ಅಧಿಕ ದೋಷಪೂರಿತ ನೀರಿನ ಮೀಟರ್‌ಗಳನ್ನು ಬದಲಿಸಲಾಗಿದೆ ಎಂದರು.
ನೀರಿನ ಸಮಸ್ಯೆ ಇರುವ ಎತ್ತರದ ಪ್ರದೇಶಗಳಲ್ಲಿ ಮಾಹಿತಿ ಬಂದ ತಕ್ಷಣ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಸಿದ್ಧತೆ ಮಾಡಿ ಕೊಳ್ಳಲಾಗಿದೆ. ಇದಕ್ಕಾಗಿ ಟೆಂಡರ್ ಪ್ರಕ್ರಿಯೆ ಕೂಡಾ ಆಗಿದೆ. ಈಗ ಎಲ್ಲಿಯಾದರೂ ನೀರಿನ ಕೊರತೆ ಉಂಟಾದಲ್ಲಿ ಟ್ಯಾಂಕರ್ ನೀರು ನೀಡಲಾಗುತ್ತಿದೆ ಎಂದರು.

ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಬೇಕಾಗಿರುವುದರಿಂದ ರೈತರ ಬೆಳೆಗೆ ನೀರು ನೀಡಲು ಸಾಧ್ಯವಾಗುವುದಿಲ್ಲ. ಅಲ್ಲದೇ ಮಣಿಪಾಲ ಸಂಸ್ಥೆಗಳಿಗೂ ತಕ್ಷಣವೇ ನೀರಿನ ರೇಷನಿಂಗ್ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚಿಸಲಾ ಗುವುದು ಎಂದು ಪ್ರಮೋದ್ ಹೇಳಿದರು.

ಸಚಿವರೊಂದಿಗೆ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ, ಪೌರಾಯುಕ್ತ ಡಿ.ಮಂಜುನಾಥಯ್ಯ, ನಗರಸಭಾ ಸದಸ್ಯರಾದ ಜನಾರ್ದನ ಭಂಡಾರ್ಕರ್, ಸೆಲಿನಾ ಕರ್ಕಡ, ನಗರಸಭಾ ಅಧಿಕಾರಿಗಳು, ಇಂಜಿನಿಯರ್‌ಗಳು, ಸ್ಥಳೀಯರು ಹಾಗೂ ಪರಿಸರ ರೈತ ಮುಖಂಡರು ಉಪಸ್ಥಿತರಿದ್ದರು.

ವಾರಕ್ಕೊಂದು ದಿನ ಬೆಳೆಗೆ ನೀರು ಬಿಡಿ:

ಪರಿಸರದ ರೈತರ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕವನ್ನು ಜನವರಿ ಮೊದಲ ವಾರದಲ್ಲೇ ತೆಗೆಯಲಾಗಿದೆ. ಇಲ್ಲಿಂದ ಪೈಪ್‌ಲೈನ್‌ನಲ್ಲಿ ಹೋಗುವ ನೀರನ್ನು ಉಡುಪಿಯ ಜನತೆ ಬೇಕಾದಂತೆ ದುರ್ಬಳಕೆ ಮಾಡುತ್ತಾರೆ. ಆದರೆ ನಮಗೆ ರೈತರಿಗೆ ವಾರದಲ್ಲಿ ಒಂದು ದಿನ ನೀರು ಬಿಡಿ ಎಂದರೆ ಸಬೂಬು ಹೇಳುತ್ತಾರೆ ಎಂದು ಪ್ರಗತಿ ಪರ ರೈತ ಕುದಿ ಶ್ರೀನಿವಾಸ ಭಟ್ ಆರೋಪಿಸಿದರು.

ಬಜೆಯಲ್ಲಿ ಹೂಳೆತ್ತದೆ ಎಂಟು ವರ್ಷ ಆಗಿದೆ. ಇಲ್ಲೀಗ ಎರಡು ಮೀಟರ್ ಹೂಳು ತುಂಬಿದೆ. ಅದನ್ನು ತೆಗೆದರೆ ನೀರು ಇನ್ನಷ್ಟು ಹೆಚ್ಚಲಿದೆ. ಇದರೊಂದಿಗೆ ಶೀಂಬ್ರದಲ್ಲಿ ಇನ್ನೊಂದು ಅಣೆಕಟ್ಟು ಕಟ್ಟಿ ಎಂದು ರೈತ ಸಂಘ ಹಲವು ವರ್ಷಗಳಿಂದ ಮನವಿ ಮಾಡುತ್ತಿದೆ. ಆದರೆ ಈ ನಿಟ್ಟಿನಲ್ಲಿ ಕೆಲಸವೇನೂ ಆಗುತ್ತಿಲ್ಲ ಎಂದವರು ಬೇಸರಿಸಿದರು.

ಶಿರೂರಿನಲ್ಲಿ ನಿರ್ಮಿಸಲಾದ ಎರಡನೇ ಹಂತದ ಅಣೆಕಟ್ಟು ನಿರ್ಮಾಣ ದೋಷಪೂರಿತವಾಗಿದೆ. ಅದರಿಂದ ಹೆಚ್ಚಿನ ನೀರು ಸಂಗ್ರಹವಾಗುತ್ತಿಲ್ಲ. ಇಲ್ಲಿ ರೈತರು ಮಾತ್ರ ತ್ಯಾಗ ಮಾಡಬೇಕಾಗಿದೆ. ನಮ್ಮ ತೋಟಗಾರಿಕಾ ಬೆಳೆಗಳೆಲ್ಲಾ ಒಣಗಿದೆ. ಅದಕ್ಕೆ ವಾರಕ್ಕೊಂದು ದಿನ ನೀರು ಬಿಡಿ ಎಂದರೂ ಕೇಳುತ್ತಿಲ್ಲ ಎಂದು ಭಟ್ ಹೇಳಿದರು.

  ಜನವರಿಯಿಂದ ಪರಿಸರದ 68 ರೈತರ 71 ಪಂಪ್‌ಸೆಟ್‌ಗಳು ಸ್ತಬ್ಧವಾಗಿವೆ. ನೂರಾರು ಎಕರೆ ಪ್ರದೇಶದ ತೋಟಗಾರಿಕಾ ಬೆಳೆಗಳು ಕರಟಿ ಬಾಡುತ್ತಿವೆ ಎಂದು ಹೇಳಿದ ಪರಿಸರದ ರೈತರು, ಕುಡಿಯುವ ನೀರಿಗೆ ಆದ್ಯತೆ ಸರಿ. ಆದರೆ ಪ್ರತಿವರ್ಷದ ಸಮಸ್ಯೆಗೆ ಶಾಶ್ವತ ಪರಿಹಾರ ಕಾಣದೇ, ಪ್ರತಿ ವರ್ಷ ರೈತರ ಮೇಲೆ ಜನವರಿಯಿಂದಲೇ ಗದಾಪ್ರಹಾರ ಮಾಡುತ್ತಾರೆ. ಹಾಗಾದರೆ ರೈತರು ಹಾಗೂ ಅವರ ಶ್ರಮಗಳಿಗೆ ಇಲ್ಲಿ ಯಾವುದೇ ಬೆಲೆ ಇಲ್ಲವೇ ಎಂದು ಹಿರಿಯ ರೈತರೊಬ್ಬರು ಗದ್ಗದಿತರಾಗಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News