ಬಲೂಚಿಗಳ ಹೋರಾಟವನ್ನು ಬೆಂಬಲಿಸಿ: ಭಾರತಕ್ಕೆ ನೈಲಾ ಮನವಿ
ಮಣಿಪಾಲ, ಫೆ.16: ಬಲೂಚಿಸ್ತಾನದ ಸರ್ವನಾಶಕ್ಕೆ ಪಾಕಿಸ್ತಾನ ಕಟಿಬದ್ಧವಾಗಿದ್ದು, ಬಲೂಚಿಗಳ ಜನಹತ್ಯೆ ನಿರಂತರವಾಗಿ ನಡೆಯುತ್ತಿದೆ. ಪಾಕಿಸ್ತಾನದ ಒಂದು ಭಾಗವೇ ಆಗಿರುವ ಬಲೂಚಿಗಳ ಹೋರಾಟಕ್ಕೆ ಭಾರತ ಬೆಂಬಲ ನೀಡಬೇಕು ಎಂದು ವರ್ಲ್ಡ್ ಬಲೂಚಿ ವುಮೆನ್ ಫಾರಂನ ಅಧ್ಯಕ್ಷೆ, ಬಲೂಚಿಸ್ತಾನದ ಮಾನವ ಹಕ್ಕುಗಳ ಹೋರಾಟಗಾರ್ತಿ ನೈಲಾಕ್ವಾದ್ರಿ ಬಲೂಚಿ ಅವರು ಮನವಿ ಮಾಡಿದ್ದಾರೆ.
ಮಣಿಪಾಲ ವಿವಿಯ ಜಿಯೋಪಾಲಿಟಿಕ್ಸ್ ಮತ್ತು ಅಂತಾರಾಷ್ಟ್ರೀಯ ರಿಲೇಷನ್ಸ್ ವಿಭಾಗದ ವತಿಯಿಂದ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.
ಪಾಕಿಸ್ತಾನ ಇಡೀ ವಿಶ್ವಕ್ಕೆ ಭಯೋತ್ಪಾದನೆಯನ್ನು ಹರಡುವ ರಾಷ್ಟ್ರವಾಗಿದ್ದು, ತಮ್ಮದೇ ದೇಶದ ಭಾಗವಾಗಿರುವ ಬಲೂಚಿಸ್ತಾನದ ಮೇಲೆ ಅವರು ನಿರಂತರ ದಬ್ಬಾಳಿಕೆ ಮಾಡಿಕೊಂಡು ಬಂದಿದೆ. ಇಲ್ಲಿನ ಜನರ ಸಾಮೂಹಿಕ ಹತ್ಯೆಯನ್ನು ಪಾಕಿಸ್ತಾನ ಸೈನ್ಯ ಮಾಡಿಕೊಂಡು ಬಂದಿದೆ ಎಂದವರು ಬಲೂಚಿಗಳ ದಯನೀಯ ಸ್ಥಿತಿಯನ್ನು ವಿವರಿಸುತ್ತಾ ನುಡಿದರು.
2004ರಿಂದೀಚೆಗೆ ಮಹಿಳೆಯರು, ಮಕ್ಕಳು ಸೇರಿದಂತೆ 30,000 ಮಂದಿ ಬಲೂಚಿಗಳು ನಾಪತ್ತೆಯಾಗಿದ್ದಾರೆ. ಬಲೂಚಿಸ್ತಾನ ಪ್ರಾವಿನ್ಸ್‌ನ ಅನೇಕ ಕಡೆಗಳಲ್ಲಿ ಸಾಮೂಹಿಕ ಸಶ್ಮಾನಗಳು ಪತ್ತೆಯಾಗುತ್ತಿವೆ. ಬಲೂಚಿಗಳ ಸಂಪೂರ್ಣ ಹತ್ಯೆಗೆ ಅದು ಮುಂದಾಗುವ ಭೀತಿ ಇದೆ ಎಂದರು.
ಸ್ವತಂತ್ರವಾಗಿದ್ದ ಬಲೂಚಿಸ್ತಾನವನ್ನು ಪಾಕಿಸ್ತಾನ 1948ರಲ್ಲಿ ಬಲಾತ್ಕಾರವಾಗಿ ಸ್ವಾಧೀನ ಪಡಿಸಿಕೊಂಡಿತು. ಅಂದಿನಿಂದ ಇಂದಿನವರೆಗೂ ಬಲೂಚಿಗಳು ಸ್ವಾತಂತ್ರವನ್ನು ಮರಳಿ ಪಡೆಯಲು ನಿರಂತರ ಹೋರಾಟ ನಡೆಸುತಿದ್ದಾರೆ. ಇದಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸತತ ಪ್ರಯತ್ನ ನಡೆಸಲಾಗುತ್ತಿದೆ. ಕಳೆದ ವರ್ಷ ಭಾರತದ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಬಲೂಚಿಸ್ತಾನವನ್ನು ಉಲ್ಲೇಖಿಸಿದ್ದು, ನಮ್ಮ ಹೋರಾಟಕ್ಕೆ ಬೆಂಬಲವನ್ನು ಘೋಷಿಸಬೇಕು ಎಂದರು.
1971ರಲ್ಲಿ ಪಾಕಿಸ್ತಾನದ ಕೈಯಿಂದ ಬಾಂಗ್ಲಾ ದೇಶಕ್ಕೆ ವಿಮೋಚನೆ ದೊರಕಿಸಿಕೊಟ್ಟ ಭಾರತ, ನಮಗೂ ಸಹಾಯಹಸ್ತ ನೀಡ ಬೇಕೆಂಬುದು ನಮ್ಮ ನಿರೀಕ್ಷೆ ಎಂದರು.
ಪಾಕಿಸ್ತಾನದ ನಾಲ್ಕು ಪ್ರಾವಿನ್ಸ್‌ಗಳಲ್ಲಿ ಶೇ.52ರಷ್ಟು ವಿಸ್ತೀರ್ಣವನ್ನು ಬಲೂಚಿಸ್ತಾನ ಒಂದೇ ಹೊಂದಿದೆ. ಅಲ್ಲದೇ ಪಾಕಿಸ್ತಾನದ ನೈಸರ್ಗಿಕ ಸಂಪತ್ತು ಇರುವುದೇ ಬಲೂಚಿಸ್ತಾನದಲ್ಲಿ. ತೈಲ ನಿಕ್ಷೇಪ, ಅನಿಲ ನಿಕ್ಷೇಪ, ಚಿನ್ನ, ತಾಮ್ರದ ನಿಕ್ಷೇಪಗಳಿಂದ ಕೂಡಿರುವ ಬಲೂಚಿಸ್ತಾನದ ಮೇಲೆ ಪಾಕಿಸ್ತಾನ ಆರ್ಥಿಕತೆ ನಿಂತಿದೆ. ಆದರೆ ಅದನ್ನೆಲ್ಲಾ ಅನುಭವಿಸುವ ಪಾಕಿಸ್ತಾನ, ನಮ್ಮ ಮೇಲೆ ನಡೆಸುತ್ತಿರುವ ದಬ್ಬಾಳಿಕೆ ಮಾತ್ರ ವರ್ಣಿಸಲು ಸಾಧ್ಯವಿಲ್ಲ ಎಂದರು.
ಪಾಕಿಸ್ತಾನದೊಂದಿಗೆ ಇದೀಗ ಚೀನ, ಬಲೂಚಿಗಳ ಮೇಲೆ ಆಕ್ರಮಣ ನಡೆಸುತಿದ್ದಾರೆ. ಬಲೂಚಿಸ್ಥಾನದ ತುಂಬಾ ಚೀನಿಯರೇ ತುಂಬಿದ್ದಾರೆ. ಚೀನ ಕುಟುಂಬಗಳು ಬಲೂಚಿ ತುಂಬಾ ವ್ಯಾಪಿಸಿವೆ. ಸದ್ಯದಲ್ಲೇ ಚೀನದ ಮುಖ್ಯಮಂತ್ರಿಯೇ ಅಧಿಕಾರಕ್ಕೆ ಬಂದರೆ ಅಚ್ಚರಿ ಇಲ್ಲ ಎಂದು ನೈಲಾ ನುಡಿದರು.
ಪಾಕಿಸ್ತಾನದ ಭಯೋತ್ಪಾದನೆ ತಮ್ಮ ಗಡಿ ದಾಟಿ ಬಾರದಂತೆ ಎಚ್ಚರಿಕೆ ಕ್ರಮವಾಗಿ ಇಡೀ ಗಡಿಯನ್ನು ಶೀಲ್ ಮಾಡಿರುವ ಚೀನ, ಪಾಕಿಸ್ತಾನದೊಂದಿಗೆ 50 ಬಿಲಿಯನ್ ಡಾಲರ್ ವೌಲ್ಯದ ಚೀನ-ಪಾಕಿಸ್ತಾನ ಇಕಾನಾಮಿಕ್ ಕಾರಿಡಾರ್ (ಸಿಪಿಇಸಿ)ಗೆ ಒಪ್ಪಂದ ಮಾಡಿಕೊಂಡಿದೆ. ಇದು ಕಾರ್ಯರೂಪಕ್ಕೆ ಬಂದರೆ ಬಲೂಚಿಸ್ತಾನ ಸಂಪೂರ್ಣವಾಗಿ ನಾಶವಾದಂತೆ ಎಂದವರು ಆತಂಕ ವ್ಯಕ್ತಪಡಿಸಿದರು.
ವಿಶ್ವದ ಇತರ ರಾಷ್ಟ್ರಗಳು ನಮ್ಮ ಪರವಾಗಿ ಬೆಂಬಲಕ್ಕೆ ನಿಂತಿಲ್ಲ. ಸಾರ್ಕ್ ದೇಶಗಳಾಗಲಿ, ಅಮ್ನೆಸ್ಟಿಯಂಥ ಸಂಸ್ಥೆಗಳು ನಮಗೆ ಸಾಕಷ್ಟು ಬೆಂಬಲ ನೀಡುತ್ತಿಲ್ಲ. ಇದೀಗ ಬದಲಾದ ಅಮೆರಿಕ ಸರಕಾರದೊಂದಿಗೆ ಶಾಂತಿ ಪ್ರತಿಪಾದಕರೆಲ್ಲರೂ ಬಲೂಚಿ ಪರವಾಗಿ ನಿಂತರೆ ನಮ್ಮ ಸ್ವಾತಂತ್ರದ ಕನಸು ನನಸಾಗಬಹುದು ಎಂದರು.
ಸಂಸ್ಥೆಯ ನಿರ್ದೇಶಕ ಡಾ.ಅರವಿಂದ ಕುಮಾರ್ ಉಪಸ್ಥಿತರಿದ್ದರು.