ಪಾಕಿಸ್ತಾನದ ಧಾರ್ಮಿಕ ಕೇಂದ್ರದಲ್ಲಿ ಆತ್ಮಾಹುತಿ ದಾಳಿ; 100 ಸಾವು
ಕರಾಚಿ, ಫೆ.16: ಪಾಕಿಸ್ತಾನದ ಸಿಂಧ್ ಪ್ರಾಂತದ ಸೆಹ್ವಾನ್ ಪಟ್ಟಣದಲ್ಲಿರುವ ಮಹಾತ್ಮರೊಬ್ಬರ ದರ್ಗಾ ಇರುವ ಧಾರ್ಮಿಕ ಕೇಂದ್ರದಲ್ಲಿ ಗುರುವಾರ ರಾತ್ರಿ ಉಗ್ರನೊಬ್ಬ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ ಪರಿಣಾಮವಾಗಿ 100ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ.
ಸೂಫಿ ಲಾಲ್ ಶಾಹ್‌ಬಾಝ್ ಕಲಂದರ್ ದರ್ಗಾಕ್ಕೆ ಗೋಲ್ಡನ್ ಗೇಟ್ ಮೂಲಕ ಪ್ರವೇಶಿಸಿದ ಆತ್ಮಾಹುತಿ ಬಾಂಬರ್ ಒಬ್ಬಾತ ಅಲ್ಲಿ ನೆರೆದಿದ್ದ ಜನರ ಮೇಲೆ ಗ್ರೆನೇಡ್ ಎಸೆದನು ಎನ್ನಲಾಗಿದೆ. ಆದರೆ ಗ್ರೆನೇಡ್ ಸ್ಫೋಟಗೊಳ್ಳದೆ ಇದ್ದಾಗ , ಆತ ತನ್ನನ್ನೇ ಸ್ಫೋಟಿಸಿಕೊಂಡ ಪರಿಣಾಮವಾಗಿ 100ಕ್ಕೂ ಅಧಿಕ ಮಂದಿ ಸ್ಥಳದಲ್ಲೇ ಮೃತಪಟ್ಟರು. 150ಕ್ಕೂ ಅಧಿಕ ಮಂದಿ ಗಾಯಗೊಂಡರು ಎಂದು ತಿಳಿದು ಬಂದಿದೆ.
ದರ್ಗಾದೊಳಗೆ ಸುಮಾರು ಇನ್ನೂರಕ್ಕೂ ಅಧಿಕ ಜನರು ಜಮಾಯಿಸಿದ್ದ ವೇಳೆ ಉಗ್ರ ಆತ್ಮಾಹುತಿ ದಾಳಿ ನಡೆಸಿದ ಎನ್ನಲಾಗಿದೆ.
ಯಾವುದೇ ಉಗ್ರ ಸಂಘಟನೆಯೂ ಈ ದಾಳಿಯ ಹೊಣೆ ಹೊತ್ತುಕೊಂಡಿಲ್ಲ . ಆದರೆ ತೆಹ್ರೀಕ್ ಎ ತಾಲಿಬಾನ್‌ಉಗ್ರ ಸಂಘಟನೆಯ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಸಂಘಟನೆಯು ದರ್ಗಾದ ಮೇಲೆ ದಾಳಿ ನಡೆಸುತ್ತಿದ್ದು, , 2005ರಿಂದ ಈ ತನಕ 25ಕ್ಕೂ ಅಧಿಕ ದರ್ಗಾಗಳ ಮೇಲೆ ದಾಳಿ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.