ಸುಪ್ರೀಂ ಕೋರ್ಟ್ ಸುಪರ್ದಿಯಲ್ಲಿ ಮರು ತನಿಖೆಗೆ ಆಗ್ರಹ
ಮಂಗಳೂರು, ಫೆ.17: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ನಡೆದ ಉಜಿರೆ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸುಪರ್ದಿಯಲ್ಲಿ ಮರು ತನಿಖೆಗೊಳಪಡಿಸುವಂತೆ ಬೆಳ್ತಂಗಡಿಯ ಪ್ರಜಾಪ್ರಭುತ್ವ ವೇದಿಕೆಯ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಒತ್ತಾಯಿಸಿದ್ದಾರೆ.
ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಉಚ್ಚ ನ್ಯಾಯಾಲಯವು ಈ ಪ್ರಕರಣದ ತನಿಖೆಯಲ್ಲಿ ಸಿಬಿಐ ಲೋಪವೆಸಗಿದೆ ಎಂದು ಹೇಳಿದೆ. ಅಲ್ಲದೆ ಮರು ತನಿಖೆಯನ್ನು ಪಾರದರ್ಶಕವಾಗಿ ನಡೆಸುವಂತೆ ಆದೇಶಿಸಿದೆ. ಆದ್ದರಿಂದ ಹೊರರಾಜ್ಯದ ಸಿಬಿಐ ಅಧಿಕಾರಿಗಳನ್ನು ತನಿಖೆ ನೇಮಿಸಬೇಕು ಎಂದು ಆಗ್ರಹಿಸಿದರು.
ಈ ಪ್ರಕರಣದ ಪ್ರಮುಖ ಆರೋಪಿಗಳನ್ನು ಸಮರ್ಪಕವಾಗಿ ತನಿಖೆ ನಡೆಸಿಲ್ಲ. ಸಂಶಯಿತ ಆರೋಪಿಗಳಾದ ಉದಯ್, ಮಲಿಕ್, ಧೀರಜ್ ಅವರನ್ನು ಮಂಪರು ಪರೀಕ್ಷೆಗೊಳಪಡಿಸಿದ ಬಗ್ಗೆ ಮಾಹಿತಿಲ್ಲಿ. ಈ ಬಗ್ಗೆ ಅವರು ಸುಳ್ಳು ಹೇಳುತ್ತಿದ್ದಾರೆ. ಸೌಜನ್ಯಾ ಕುಟುಂಬಸ್ಥರ ಹೇಳಿಕೆಗಳನ್ನು ಪರಿಗಣಿಸದೇ ತನಿಖೆಯಲ್ಲಿ ಪಕ್ಷಪಾತ ಎಸಗಲಾಗಿದೆ. ತನಿಖೆ ವೇಳೆ ಪೊಲೀಸರ ಹೇಳಿಕೆಗಳು ಮತ್ತು ವೈದ್ಯರ ಹೇಳಿಕೆಗಳಿಗೆ ಒಂದಕ್ಕೊಂದು ತಾಳೆಯಾಗುತ್ತಿರಲಿಲ್ಲ. ಸದ್ಯ ಹತ್ಯೆ ಆರೋಪಿಯಾಗಿ ಗುರುತಿಸಲ್ಪಟ್ಟಿರುವ ಸಂತೋಷ್ ಕುಮಾರ್ ಒಬ್ಬನೇ ಈ ಕೃತ್ಯ ಎಸಗಲು ಸಾಧ್ಯವಿಲ್ಲ. ಇದರ ಹಿಂದಿರುವ ಪ್ರಭಾವಿ ನಾಯಕರ ಪಾತ್ರ ಬಯಲಿಗೆ ಬರಬೇಕಿದೆ. ಆದ್ದರಿಂದ ಇದೀಗ ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸುಪರ್ದಿಯಲ್ಲಿ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಠ್ಠಲ ಗೌಡ, ಕುಸುಮಾವತಿ, ಮನೋಜ್ ಉಪಸ್ಥಿತರಿದ್ದರು.