ಮೂಡುಬಿದಿರೆ ಸರಕಾರಿ ಆಸ್ಪತ್ರೆಗೆ ಕೇಂದ್ರದ 'ಕಾಯಕಲ್ಪ ಪ್ರಶಸ್ತಿ'
ಮೂಡುಬಿದಿರೆ, ಫೆ.17: ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸ್ವಚ್ಛತೆಯ ನಿರ್ವಹಣೆಗಾಗಿ ನೀಡಲಾಗುವ ಕಾಯಕಲ್ಪಪ್ರಶಸ್ತಿ ಲಭಿಸಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಹಾಗೂ ವಿವಿಧ ಖಾಸಗಿ ಕಂಪೆನಿಗಳಿಂದ ಆಸ್ಪತ್ರೆಯ ಅಭಿವೃದ್ಧಿಗೆ ಅನುದಾನ ದೊರಕಿಸಿಕೊಡಲಾಗುವುದು ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು. ಅವರು ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಮೂಡುಬಿದಿರೆ ತಾಲೂಕು ಅಲ್ಲದಿದ್ದರೂ ರಾಜ್ಯದ ಎಲ್ಲಾ ತಾಲೂಕು ಆಸ್ಪತ್ರೆಗಳ ಜೊತೆ ಸ್ಪರ್ಧಿಸಿ ರಾಜ್ಯದಲ್ಲೇ ಪ್ರಥಮ ಸ್ಥಾನಿಯಾಗಿದೆ. ಸ್ವಚ್ಛತೆ ಹಾಗೂ ಸೌಕರ್ಯಗಳ ಆಧಾರದಲ್ಲಿ ಈ ಪ್ರಶಸ್ತಿಯನ್ನು ಕೇಂದ್ರ ಸರಕಾರದಿಂದ ನೀಡುತ್ತಿದ್ದು, ಹೊಸದಿಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿ ಪಾಲ್ಗೊಂಡು ಪ್ರಶಸ್ತಿ ಸ್ವೀಕರಿಸಿದ್ದಾರೆ ಎಂದರು.
ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಆಡಳಿತಾಧಿಕಾರಿಯಾಗಿರುವ ಡಾ.ಶಶಿಕಲಾ ಮಾತನಾಡಿ, ಪ್ರಸ್ತುತ ಆಸ್ಪತ್ರೆಯಲ್ಲಿ 30 ಬೆಡ್‌ಗಳಿದ್ದು, ಉತ್ತಮ ರೀತಿಯ ಸ್ವಚ್ಛತೆಯನ್ನು ಕಾಯ್ದುಕೊಳ್ಳಲಾಗಿದೆ. ಜೊತೆಗೆ ಆಸ್ಪತ್ರೆಯ ಪರಿಸರದಲ್ಲೂ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಲಾಗಿದೆ. ತಿಂಗಳೊಂದಲ್ಲಿ ಸುಮಾರು 30ರಷ್ಟು ಹೆರಿಗೆ ಹಾಗೂ ಸಿಸೇರಿಯನ್‌ಗಳು ಯಶಸ್ವಿಯಾಗಿ ನಡೆಯುತ್ತಿದ್ದು ಜನರಿಗೆ ಉತ್ತಮ ರೀತಿಯಲ್ಲಿ ಸೇವೆ ನೀಡಲಾಗುತ್ತಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ವೈದ್ಯ ಡಾ.ಜ್ಞಾನೇಶ್ ಉಪಸ್ಥಿತರಿದ್ದರು.