×
Ad

ದ.ಭಾರತ ನಾಣ್ಯ ಶಾಸ್ತ್ರಜ್ಞರ ಸಮ್ಮೇಳನಾಧ್ಯಕ್ಷರಾಗಿ ಮೂಡುಬಿದಿರೆಯ ಎಂ. ನಿತ್ಯಾನಂದ ಪೈ

Update: 2017-02-17 17:30 IST

ಮೂಡುಬಿದಿರೆ: ಇಲ್ಲಿನ ಹೆಸರಾಂತ ನಾಣ್ಯ ತಜ್ಞ ಮೂಡುಬಿದಿರೆಯ ಮಂದರ್ಕೆ ನಿತ್ಯಾನಂದ ಪೈಯವರು ತೆಲಂಗಾಣದ ಹೈದರಾಬಾದ್‌ನ ಜ್ಯುಬಿಲಿ ಹಿಲ್ಸ್‌ನಲ್ಲಿ ಫೆ 18 ಮತ್ತು 19ರಂದು ನಡೆಯಲಿರುವ ದಕ್ಷಿಣ ಭಾರತ ನಾಣ್ಯಶಾಸ್ತ್ರಜ್ಞರ 27ನೇ ವಾರ್ಷಿಕ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ. ತುಳುನಾಡಿನ ನಾಣ್ಯಗಳ ಕುರಿತು ಸಮ್ಮೇಳನದ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅವರು ವಿಷಯ ಮಂಡಿಸಲಿದ್ದಾರೆ.

ಮೂಲತಃ ಕಾರ್ಕಳದ ಮಂದರ್ಕೆಯವರಾಗಿರುವ ನಿತ್ಯಾನಂದ ಪೈ (58) ಬಿ.ಕಾಂ ಪದವೀಧರರಾಗಿದ್ದು ಎಳೆಯ ವಯಸ್ಸಿನಿಂದಲೇ ಸಾಂಸ್ಕೃತಿಕ ಪರಿಕರಗಳನ್ನು ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡು ಅಮೂಲ್ಯ ವಸ್ತುಗಳ ಸಂಗ್ರಹವನ್ನು ತಮ್ಮಲ್ಲಿರಿಸಿಕೊಂಡಿದ್ದಾರೆ.

1992ರಲ್ಲಿ ನಾಣ್ಯ ಸಂಗ್ರಹಾಸಕ್ತಿಗೆ ತೆರದುಕೊಂಡ ನಿತ್ಯಾನಂದ ಪೈ ತುಳುನಾಡಿನ ನಾಣ್ಯಯುಗದ ಕುರಿತು ತಮ್ಮನ್ನು ತೊಡಗಿಸಿಕೊಂಡು ಪ್ರಾಚೀನ ರಾಜವಂಶಗಳ ಕಾಲದಿಂದ ಈವರೆಗಿನ ಅಮೂಲ್ಯ ನಾಣ್ಯಗಳ ಸಂಗ್ರಹವನ್ನು ಹೊಂದಿದ್ದಾರೆ. ಇದರಲ್ಲಿ ಅಳುಪರ ಕಾಲದಿಂದ ತೊಡಗಿ ಬ್ರಿಟೀಷರ ಆಡಳಿತ, ನಂತರ ಕಾಲದ ನಾಣ್ಯಗಳು, ಚಿನ್ನದ ನಾಣ್ಯಗಳು ಹೀಗೆ ಮಹತ್ವದ ಸಂಗ್ರಹವಿದೆ.

 ದಕ್ಷಿಣ ಭಾರತ ನಾಣ್ಯ ಶಾಸ್ತ್ರಜ್ಞರ ಸಂಘದ ಸದಸ್ಯರಾಗಿ ಕಳೆದ 19 ವರ್ಷಗಳಿಂದಲೂ ಸಕ್ರಿಯರಾಗಿರುವ ಪೈ ಸಂಘದ ನಿಯತಕಾಲಿಕೆಗೆ ಈಗಾಗಲೇ 20ಕ್ಕೂ ಅಧಿಕ ಪ್ರಬಂಧಗಳನ್ನು ಬರೆದಿದ್ದಾರೆ. ನಾಣ್ಯಗಳ ಕುರಿತ ಅವರ ಅಧ್ಯಯನ ಬರೆಹಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ನಾಣ್ಯ ಶಾಸ್ತ್ರಕ್ಕೆ ತಮ್ಮ ಅನನ್ಯ ಕೊಡುಗೆಗಾಗಿ ಪಿ.ಎಲ್.ಗುಪ್ತಾ ಪ್ರಶಸ್ತಿ (2010), ಶಿವಮೊಗ್ಗದ ಕೃಷ್ಣ ದೇವರಾಯ ಪ್ರಶಸ್ತಿ, ತಿರುಮಲ ದೇವಳದ ನಾಣ್ಯ ಸಮಿತಿ ಸದಸ್ಯರಾಗಿ ಗೌರವಕ್ಕೆ ಪಾತ್ರರಾಗಿರುವ ಪೈಯವರು ಹಂಪಿ ಉತ್ಸವ ಸೇರಿದಂತೆ ಹಲವು ಪ್ರಮುಖ ಉತ್ಸವಗಳಲ್ಲಿ ತಮ್ಮ ಸಂಗ್ರಹ, ಪ್ರದರ್ಶನವನ್ನೂ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News