ಹೊಸತನದ ಕೃತಿಗಳ ರಚನೆಯಾಗಲಿ: ಪಳಕಳ ಸೀತಾರಾಮ ಭಟ್ಟ

Update: 2017-02-17 12:24 GMT

ಮೂಡುಬಿದಿರೆ, ಫೆ.17: ಮಕ್ಕಳ ಸಾಹಿತ್ಯದಲ್ಲಿ ಮಕ್ಕಳ ನಾಟಕ, ಕಾದಂಬರಿಗಳಂತಹ ವಿನೂತ ಪ್ರಯೋಗಗಳು ಇಂದಿನ ದಿನಗಳಲ್ಲಿ ಕಡಿಮೆ. ಮಕ್ಕಳ ಸಾಹಿತಿಗಳು ಕೇವಲ ಮಕ್ಕಳ ಕತೆ, ಕವನ ಬರೆದರೆ ಸಾಲದು ಹೊಸತನದ ಕೃತಿಗಳ ರಚನೆಯಾಗಬೇಕು ಎಂದು ಕೇಂದ್ರ ಬಾಲಸಾಹಿತ್ಯ ಪುರಸ್ಕಾರ ವಿಜೇತ ಹಿರಿಯ ಮಕ್ಕಳ ಸಾಹಿತಿ ಪಳಕಳ ಸೀತಾರಾಮ ಭಟ್ಟ ಅಭಿಪ್ರಾಯಪಟ್ಟರು.

ಮೂಡುಬಿದ್ರೆಯ ಸಮೀಪದ ಮಿತ್ತಬೈಲ್‌ನಲ್ಲಿ ಶುಕ್ರವಾರ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಬೆಂಗಳೂರಿನ ಹ.ಸ.ಬ್ಯಾಕೋಡ ಬರೆದ ಮಕ್ಕಳ ನಾಟಕ "ಹಾರಿಹೋದ ಪಾರಿವಾಳ" ಕೃತಿಯನ್ನು ಹಾಗೂ ಹಿರಿಯ ಮಕ್ಕಳ ಸಾಹಿತಿ ನಿರ್ಮಲಾ ಸುರತ್ಕಲ್ ಅವರ ಮಕ್ಕಳ ಕಾದಂಬರಿ "ಶ್ರಮಯೇವ ಜಯತೆ" ಕೃತಿಯನ್ನು ಬಿಡುಗಡೆ ಮಾಡಿದ ಬಳಿಕ ಅವರು ಮಾತನಾಡಿದರು.

ಬಹುತೇಕ ಮಕ್ಕಳ ಸಾಹಿತ್ಯದಲ್ಲಿ ತಾಳ, ಲಯವಿಲ್ಲದ ಕವಿತೆಗಳನ್ನು ರಚಿಸುತ್ತಿದ್ದಾರೆ. ಅಂತಹ ಕವಿತೆಗಳು ಮಕ್ಕಳಿಗೆ ಒಗ್ಗುವುದಿಲ್ಲ. ಲಯ ತಾಳವಿರುವ ಕವಿತೆಗಳ ಮಕ್ಕಳಿಗೆ ಬೇಕು ಎಂದು ಜಿಪಿ ರಾಜರತ್ನಂ ಹೇಳಿದ್ದಾರೆ. ಅಂತಹ ಕವಿತೆಗಳ ರಚನೆ ಈಗಿನ ಸಾಹಿತಿಗಳಿಂದ ಆಗುತ್ತಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಛಾಯಾಗ್ರಾಹಕ ಇಂದ್ರಕುಮಾರ್ ಬಿ.ದಸ್ತೇನವರ್ ಹಾಗೂ ಪಳಕಳ ಸೀತಾರಾಮ ಭಟ್ಟ ಅವರ ಪತ್ನಿ ವಸಂತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News