ಕೇರಳದ ಶಾಲಾ ಮಧ್ಯಾಹ್ನದೂಟಕ್ಕೆ ಕೇಂದ್ರಸರಕಾರದ ಪ್ರಶಂಸೆ
ಹೊಸದಿಲ್ಲಿ,ಫೆ. 17: ಕೇರಳದ ಶಾಲೆಗಳ ಯಶಸ್ವೀ ಮಧ್ಯಾಹ್ನದೂಟ ಕಾರ್ಯಕ್ರಮವನ್ನು ಪರಿಗಣಿಸಿ ಈ ಯೋಜನೆ ಅಡಿಯಲ್ಲಿ ಕೇರಳಕ್ಕೆ 13 ಕೋಟಿ ರೂಪಾಯಿ ಹೆಚ್ಚುವರಿ ನೆರವನ್ನು ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ. 2017-18ರ ಆರ್ಥಿಕ ವರ್ಷದಲ್ಲಿ 203.41ಕೋಟಿ ರೂಪಾಯಿ ಕೇರಳಕ್ಕೆ ನೀಡಲು ಈ ಯೋಜನೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಚಿವಾಲಯದ ಅವಲೋಕನ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಹೆಚ್ಚುವರಿ ಹಣವನ್ನು ದೈನಂದಿನ ಖರ್ಚಿಗೆ ಬಳಸಿಕೊಳ್ಳಬೇಕಾಗಿದೆ.
ಇದಲ್ಲದೆ ಅಡುಗೆ ಮನೆಯ ನಿರ್ಮಾಣಕ್ಕೆ 109 ಕೋಟಿ ರೂಪಾಯಿ ನೀಡಲಾಗುತ್ತದೆ. ರಾಜ್ಯಸರಕಾರದ ಪಾಲು ಸೇರಿದಾಗ 183 ಕೋಟಿ ರೂಪಾಯಿ ಖರ್ಚಿನಲ್ಲಿ ಕೇರಳದಲ್ಲಿ 3021 ಶಾಲೆಗಳಲ್ಲಿ ಹೊಸ ಅಡುಗೆ ಕೋಣೆಗಳನ್ನು ನಿರ್ಮಿಸಬಹುದಾಗಿದೆ.
ರಾಜ್ಯ ಕೇಳಿದ ಎಲ್ಲ ಹಣವನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಕೇರಳದ ಮಧ್ಯಾಹ್ನದೂಟ ಕಾರ್ಯಕ್ರಮಕ್ಕೆ ನೀಡಿದ್ದು, ಈವರೆಗೂ ಕೇರಳದಲ್ಲಿ ಉತ್ತಮವಾಗಿ ನಡೆಯುತ್ತಿರುವ ಶಾಲಾ ಮಧ್ಯಾಹ್ನದೂಟ ವ್ಯವಸ್ಥೆಗಾಗಿ ಅಭಿನಂದಿಸಿದೆ. ಸ್ಥಳೀಯಾಡಳಿತ ಸಂಸ್ಥೆಗಳು, ಸ್ವಯಂಸೇವಾ ಸಂಘಟನೆಗಳು ಕೇರಳದಲ್ಲಿ 1500ಕ್ಕೂ ಹೆಚ್ಚು ಶಾಲೆಗಳಲ್ಲಿ ಬೆಳಗ್ಗಿನ ಆಹಾರ ನೀಡುತ್ತಿದ್ದು ಇದು ಇತರ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಅವಲೋಕನಾ ಸಭೆ ಹೇಳಿದೆ.
ಇತರ ರಾಜ್ಯಕ್ಕಿಂತ ಭಿನ್ನವಾಗಿ ಹೆಚ್ಚು ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಪ್ರಯೋಜನ ಸಿಗಲು ರಾಜ್ಯ ಸರಕಾರ ಹೆಚ್ಚು ಹಣವನ್ನು ಮಧ್ಯಾಹ್ನದೂಟ ಯೋಜನೆಗೆ ನೀಡುತ್ತಿರುವುದು ಕಾರಣವಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ ಕೇರಳದಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರಕಾರ ಶೇ.60 ಮತ್ತು ರಾಜ್ಯ ಸರಕಾರ ಶೇ.40ರಷ್ಟು ವೆಚ್ಚ ಭರಿಸುವ ಯೋಜನೆಯಾಗಿದ್ದರೂ ಕೇರಳದಲ್ಲಿ ರಾಜ್ಯಸರಕಾರ ಶೇ.200ಕ್ಕಿಂತ ಹೆಚ್ಚು ಹಣವನ್ನು ನೀಡುತ್ತಿದೆ. ಮಧ್ಯಾಹ್ನದೂಟದ ಕಾರ್ಯಕ್ರಮದ ಭಾಗವಾಗಿ ಮೊಟ್ಟೆ ,ಹಾಲು ನೀಡುವುದು ಕೇರಳದ ಸಾಧನೆಯೆಂದು ಅವಲೋಕನಾ ಸಭೆಯಲ್ಲಿ ಕೇರಳವನ್ನು ಪ್ರಶಂಸಿಲಾಗಿದೆ.
ಸಾರ್ವಜನಿಕ ಶಿಕ್ಷಣ ನಿರ್ದೇಶಕಿ ಉಷಾ ಟೈಟಸ್, ಡಿಪಿಐ ಕೆ.ವಿ. ಮೋಹನ್ ಕುಮಾರ್, ಮಧ್ಯಾಹ್ನದೂಟ ಯೋಜನೆ ಸಮಿತಿ ಸದಸ್ಯರು ಕೇರಳವನ್ನು ಪ್ರತಿನಿಧಿಸಿ ಅವಲೋಕನಾ ಸಭೆಯಲ್ಲಿ ಭಾಗವಹಿಸಿದ್ದರೆಂದು ವರದಿ ತಿಳಿಸಿದೆ.