×
Ad

ಕೆಂಪುಕೋಟೆ, ನ್ಯಾಯಾಲಯದ ಬಣ್ಣ ಕೇಸರೀಕರಣಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ

Update: 2017-02-17 19:12 IST

ಮಂಗಳೂರು, ಫೆ.17: ಕೋಮುವಾದದ ವಿಷಬೀಜ ಬಿತ್ತುವ ಸಂಘಪರಿವಾರವು ದೇಶದ ಆಡಳಿತವನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಿದೆ. ಅದರ ಪರಿಣಾಮ ದೇಶದೆಲ್ಲೆಡೆ ಅಸಹಿಷ್ಣುತೆ ಹೆಚ್ಚುತ್ತಿವೆ. ಕೆಂಪುಕೋಟೆ ಮತ್ತು ನ್ಯಾಯಾಲಯಗಳ ಬಣ್ಣ ಕೇಸರೀಕರಣಗೊಳ್ಳುತ್ತಿವೆ. ಅದು ಸಂಪೂರ್ಣಗೊಳ್ಳುವ ಮುನ್ನ ಈ ನಾಡಿನ ಪ್ರಜ್ಞಾವಂತರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಪಿಎಫ್‌ಐ ರಾಷ್ಟ್ರೀಯ ಸಮಿತಿ ಸದಸ್ಯ ಕೆ.ಎಂ.ಶರೀಫ್ ಹೇಳಿದರು.

ಪಿಎಫ್‌ಐ ದ.ಕ.ಜಿಲ್ಲಾ ಸಮಿತಿ ‘ಪಾಪ್ಯುಲರ್ ಫ್ರಂಟ್ ಡೇ’ ಪ್ರಯುಕ್ತ ಶುಕ್ರವಾರ ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಂಡ ಸಾರ್ವಜನಿಕ ಸಮಾವೇಶದಲ್ಲಿ ಅವರು ಮುಖ್ಯಭಾಷಣ ಮಾಡಿದರು.

ದೇಶದ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗ ಎದುರಿಸುವ ಸಮಸ್ಯೆ ಮತ್ತು ಸವಾಲುಗಳಿಗೆ ಪ್ರತ್ಯುತ್ತರವಾಗಿ ಹುಟ್ಟಿಕೊಂಡ ಪಿಎಫ್‌ಐ ಸಮಾಜದಲ್ಲಾಗವ ಅನ್ಯಾಯ, ಅಕ್ರಮ, ಅನೀತಿಯ ವಿರುದ್ಧ ಚಳವಳಿಗಳನ್ನು ನಡೆಸುತ್ತಲೇ ಬಂದಿದೆ. ಆದಾಗ್ಯೂ ದೇಶದಲ್ಲಿ ಸಂಘಪರಿವಾರ ಪ್ರೇರಿತ ಸಂಘಟನೆಗಳು ಅಲ್ಲಲ್ಲಿ ತನ್ನ ಮತೀಯ ಅಜೆಂಡಾವನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತಿವೆ. ಸತ್ಯದ ಪ್ರತಿಪಾದಕ ಮತ್ತು ಹಿಂಸೆಯ ವಿರೋಧಿಯಾಗಿರುವ ಮಹಾತ್ಮಾ ಗಾಂಧಿಯ ಚಿಂತನೆಯನ್ನು ಬದಿಗೆ ಸರಿಸಲೋ ಎಂಬಂತೆ ಪ್ರಧಾನಿ ನರೇಂದ್ರ ಮೋದಿಯ ಆಡಳಿತ ನೀತಿ ಸಾಗುತ್ತಿದೆ.

ಜಾತ್ಯತೀತ ರಾಷ್ಟ್ರದ ಕಲ್ಪನೆಗೂ ಮಾರಕ ಎಂಬಂತೆ ಆಹಾರ, ಧರ್ಮ, ಸಂಪತ್ತುಗಳ ಮೇಲೆ ಹಿಡಿತ ಸಾಧಿಸಲು ಪ್ರಯತ್ನ ನಡೆಯುತ್ತಿದೆ. ನೋಟುಗಳನ್ನು ಅಮಾನ್ಯ ಮಾಡುವಾಗಲೂ ಸಂಪುಟ ಒಪ್ಪಿಗೆ ಪಡೆಯದೆ, ದೇಶದ ಆರ್ಥಿಕ ತಜ್ಞರ ಜೊತೆ, ಚರ್ಚೆ ನಡೆಸದೆ ಸೈನ್ಯದ ದಂಡನಾಯಕರ ಜೊತೆ ಸಮಾಲೋಚನೆ ಮಾಡುವಂತಹ ಪ್ರಧಾನಿಯ ಕಾರ್ಯವೈಖರಿಯ ಬಗ್ಗೆ ಜಾಗರೂಕರಾಗಬೇಕಾಗಿದೆ ಎಂದು ಕೆ.ಎಂ. ಶರೀಫ್ ಹೇಳಿದರು.

 ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜವನ್ನು ಎಂದೂ ಗೌರವಿಸದ, ಯೋಗದ ಹೆಸರಿನಲ್ಲಿ ತೆರಿಗೆ ಹಣ ಪೋಲು ಮಾಡುವ, ಸಕಾರಣವಿಲ್ಲದೆ ಎನ್‌ಜಿಒಗಳ ಪರವಾನಿಗೆ ರದ್ದುಮಾಡುವ, ಝಾಕಿರ್ ನಾಯಕ್‌ರಂತಹ ಮುಸ್ಲಿಂ ಧಾರ್ಮಿಕ ವಿದ್ವಾಂಸರನ್ನು ಗುರಿ ಮಾಡುವ ಷಡ್ಯಂತ್ರದ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದು ಕೆ.ಎಂ. ಶರೀಫ್ ನುಡಿದರು.

ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಅಬ್ದುರ್ರಝಾಕ್ ಕೆಮ್ಮಾರ ಅಧ್ಯಕ್ಷತೆ ವಹಿಸಿದ್ದರು. ಯುನಿವೆಫ್ ರಾಜ್ಯಾಧ್ಯಕ್ಷ ರಫೀಉದ್ದೀನ್ ಕುದ್ರೋಳಿ, ಕೇರಳದ ಹ್ಯೂಮನ್ ರಿಸೋರ್ಸ್ ಡೆವಲಪ್‌ಮೆಂಟ್ ಫೌಂಡೇಶನ್‌ನ ವೌಲಾನಾ ಎಂ.ಕೆ. ಅಬ್ದುಲ್ ಮಜೀದ್ ಕಾಸಿಮಿ, ಸಮಾಜ ಪರಿವರ್ತನಾ ವೇದಿಕೆಯ ಅಧ್ಯಕ್ಷ ಡೀಕಯ್ಯ, ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಮಾತನಾಡಿದರು.

ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಇಬ್ರಾಹೀಂ ಮಜೀದ್ ತುಂಬೆ, ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಖಾದರ್ ಪುತ್ತೂರು, ಎಸ್‌ಡಿಪಿಐ ದ.ಕ.ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ, ಎನ್‌ಸಿಎಚ್‌ಆರ್‌ಒ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ವಳವೂರು ಎಸಿಇ ಫೌಂಡೇಶನ್‌ನ ಅಧ್ಯಕ್ಷ ಸಾದುದ್ದೀನ್ ಸಾಲಿಹ್, ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಹಾಜಿ ಹಮೀದ್ ಕಂದಕ್, ಎಸ್‌ಡಿಟಿಯು ರಾಜ್ಯಾಧ್ಯಕ್ಷ ಅಬ್ದುಲ್ ಜಲೀಲ್ ಕೆ., ದ.ಕ.ಜಿಲ್ಲಾ ಮದ್ರಸ ಮ್ಯಾನೇಜ್‌ಮೆಂಟ್ ಉಪಾಧ್ಯಕ್ಷ ಇಕ್ಬಾಲ್ ಅಹ್ಮದ್ ಮುಲ್ಕಿ, ಮಂಗಳೂರು ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲಿ ಹಸನ್, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸಲಹೆಗಾರ ರಫೀಕ್ ಮಾಸ್ಟರ್, ಸಿಎಫ್‌ಐ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ತಫ್ಸೀರ್, ಪಿಎಫ್‌ಐ ಬಂಟ್ವಾಳ ಜಿಲ್ಲಾಧ್ಯಕ್ಷ ಇಜಾಸ್ ಅಹ್ಮದ್, ಪಿಎಫ್‌ಐ ಉಡುಪಿ ಜಿಲ್ಲಾಧ್ಯಕ್ಷ ನಿಸಾರ್ ಅಹ್ಮದ್ ಬ್ರಹ್ಮಾವರ, ಇಸ್ಲಾಹಿ ವಿದ್ಯಾಸಂಸ್ಥೆಯ ಮುಖ್ಯಸ್ಥ ಯು.ಎ.ಕಾಸಿಮ್ ಉಳ್ಳಾಲ, ಕ್ರಿಯೇಟಿವ್ ಫೌಂಡೇಶನ್‌ನ ನಝೀರ್ ಅಹ್ಮದ್, ಕಾರ್ಪೊರೇಟರ್ ಅಯಾಝ್ ಕೃಷ್ಣಾಪುರ ಉಪಸ್ಥಿತರಿದ್ದರು.

 ಪಿಎಫ್‌ಐ ರಾಜ್ಯ ಸಮಿತಿ ಸದಸ್ಯ ಮುಹಮ್ಮದ್ ಹನೀಫ್ ಕಾಟಿಪಳ್ಳ ಸ್ವಾಗತಿಸಿದರು. ಪಿಎಫ್‌ಐ ಮಂಗಳೂರು ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲ ವಂದಿಸಿದರು. ಎ.ಕೆ. ಅಶ್ರಫ್ ಮತ್ತು ಅಶ್ರಫ್ ಮಾಚಾರ್ ಕಾರ್ಯಕ್ರಮ ನಿರೂಪಿಸಿದರು.

‘ಸೂಕ್ಷ್ಮ ಪ್ರದೇಶ ಎಂಬ ಕಾರಣಕ್ಕೆ ಉಳ್ಳಾಲದಲ್ಲಿ ನಡೆಯಬೇಕಾಗಿದ್ದ ಈ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ ಅವಕಾಶ ನೀಡಿಲ್ಲ ಎಂಬುದು ವ್ಯವಸ್ಥೆಯ ಅಣಕವಾಗಿದೆ. ಇದನ್ನು ಅವಲೋಕಿಸುವಾಗ ನಾವು ಜಾತ್ಯತೀತ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿದ್ದೇವೆಯೋ ಎಂಬ ಪ್ರಶ್ನೆ ಕಾಡುತ್ತಿವೆ. ಇಸ್ಲಾಮನ್ನು, ಮುಸ್ಲಿಮರನ್ನು ಅನುಮಾನದಿಂದ ನೋಡುವ ಇಂತಹ ಪ್ರವೃತ್ತಿಗೆ ಇಂತಹ ಏಕತಾ ರ್ಯಾಲಿಯ ಮೂಲಕ ಸ್ಪಷ್ಟ ಸಂದೇಶ ನೀಡಬೇಕಾಗಿದೆ

ಯೋಗೇಶ್ ಮಾಸ್ಟರ್ , ​ಚಿಂತಕ 

ಪಿಎಫ್‌ಐ ಸಮವಸ್ತ್ರಧಾರಿ ಕಾರ್ಯಕರ್ತರು ನೆಹರೂ ಮೈದಾನದಲ್ಲಿ ಶಿಸ್ತುಬದ್ಧವಾಗಿ ಪಥಸಂಚಲನ ನಡೆಸಿ ಗಮನ ಸೆಳೆದರು. ಈ ಸಂದರ್ಭ ಅಫೀಸರ್ಸ್‌ ಮಾರ್ಚ್ ಮತ್ತು ಬ್ಯಾಂಡ್ ಡೆಮೊ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News