ನವಾಝ್ ಶರೀಫ್ ಜೊತೆ ಮೋದಿ ಹಬ್ಬದೂಟ ಮಾಡಿದಾಗ ಯೋಧರ ಮನೋಬಲಕ್ಕೆ ಘಾಸಿಯಾಗಿಲ್ಲವೇ : ಕಾಂಗ್ರೆಸ್ ಪ್ರಶ್ನೆ

Update: 2017-02-17 14:35 GMT

ಹೊಸದಿಲ್ಲಿ, ಫೆ.17: ಕಳೆದ 30 ತಿಂಗಳಲ್ಲಿ 188 ಯೋಧರು ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟಾಗ ಮತ್ತು ನವಾಝ್ ಶರೀಫ್‌ರ ಜೊತೆ ಪ್ರಧಾನಿ ಮೋದಿ ಹಬ್ಬದೂಟ ಮಾಡಿದಾಗ ಯೋಧರ ಮನೋಬಲಕ್ಕೆ ಘಾಸಿಯಾಗಿಲ್ಲವೇ ಎಂದು ಪ್ರಶ್ನಿಸುವ ಮೂಲಕ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

  ಕಾಂಗ್ರೆಸ್ ಪಕ್ಷದವರು ಸೇನಾಪಡೆ ಮುಖ್ಯಸ್ಥ ಬಿಪಿನ್ ರಾವತ್ ಅವರ ಹೇಳಿಕೆಗೆ ರಾಜಕೀಯ ಬಣ್ಣ ನೀಡುತ್ತಿದ್ದಾರೆ ಮತ್ತು ಪ್ರತ್ಯೇಕತಾವಾದಿಗಳ ರೀತಿಯಲ್ಲಿ ಹೇಳಿಕೆ ನೀಡುವ ಮೂಲಕ ಯೋಧರ ಮನೋಬಲಕ್ಕೆ ಘಾಸಿ ತರುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು.

  ಕಳೆದ 30 ತಿಂಗಳಲ್ಲಿ 188ಕ್ಕೂ ಹೆಚ್ಚು ಯೋಧರು ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ಆದರೆ ಪಾಕಿಸ್ತಾನವನ್ನು ನಿಯಂತ್ರಿಸಲು ಮೋದಿಯವರಿಂದ ಸಾಧ್ಯವಾಗಿಲ್ಲ. ಹೇಳಿ..ಇದರಿಂದ ಯೋಧರ ಆತ್ಮಸ್ಥೈರ್ಯಕ್ಕೆ ಘಾಸಿಯಾಗಿಲ್ಲವೇ ಎಂದು ಕಾಂಗ್ರೆಸ್‌ನ ಪ್ರಧಾನ ವಕ್ತಾರ ರಣದೀಪ್ ಸುರ್ಜೆವಾಲಾ ಸರಣಿ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

  ಯೋಧರು ದೇಶಕ್ಕಾಗಿ ಪ್ರಾಣ ತೆತ್ತಾಗ ಮೋದಿಯವರು ಪಾಕ್ ಪ್ರಧಾನಿ ನವಾಝ್ ಶರೀಫ್‌ರನ್ನು ಸತ್ಕರಿಸಿ ಔತಣದ ಊಟ ಮಾಡಿದ್ದರು. ಇದರಿಂದ ಯೋಧರ ಆತ್ಮಸ್ಥೈರ್ಯಕ್ಕೆ ಘಾಸಿಯಾಗಿಲ್ಲವೇ . ಪಠಾಣ್‌ಕೋಟ್ ಸೇನಾನೆಲೆಯ ಮೇಲೆ ದಾಳಿ ನಡೆಸಿದ ಪ್ರಕರಣದ ತಪಾಸಣೆ ನಡೆಸಲು ‘ಧೂರ್ತ ಐಎಸ್‌ಐ’ಯನ್ನು ಮೋದಿ ಆಹ್ವಾನಿಸಿದಾಗ, ಅಥವಾ ಕಾಶ್ಮೀರದ ಬಿಜೆಪಿ-ಪಿಡಿಪಿ ಮೈತ್ರಿಕೂಟ ಸರಕಾರ ಉಗ್ರರ ಸಂಬಂಧಿಗಳಿಗೆ ಪರಿಹಾರ ನೀಡಿದಾಗ , ಸೇನೆಯ ವಿರುದ್ಧ ಗೂಢಚಾರಿಕೆ ನಡೆಸುತ್ತಿದ್ದ ಜಾಲದ ಜೊತೆ ಮಧ್ಯಪ್ರದೇಶದ ಬಿಜೆಪಿ ಸದಸ್ಯರು ಕಾಣಿಸಿಕೊಂಡಾಗ- ಯೋಧರ ಆತ್ಮಸ್ಥೈರ್ಯಕ್ಕೆ ಘಾಸಿಯಾಗಿಲ್ಲವೇ ಎಂದವರು ಪ್ರಶ್ನಿಸಿದ್ದಾರೆ. ಇದಕ್ಕೂ ಮೊದಲು, ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಪರವಾಗಿ ಇರುವವರ ವಿಷಯದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ, ರಾಜ್ಯದ ಜನರೊಡನೆ ವ್ಯವಹರಿಸುವಾಗ ಭದ್ರತಾ ಪಡೆಗಳು ಸಂಯಮ ವಹಿಸಬೇಕು ಎಂದು ಹೇಳಿದರು.

  ದೇಶದ ಆಂತರಿಕ ಭದ್ರತೆ ಒಂದು ಗಂಭಿರ ವಿಷಯ ಮತ್ತು ಇದರಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಆದರೆ ನಾನು ಕಳೆದ ಅಧಿವೇಶನದಲ್ಲಿ ಹೇಳಿರುವಂತೆ, ತಪ್ಪು ಮಾಡಿದವರನ್ನು ಶಿಕ್ಷಿಸಬೇಕು ಅಮಾಯಕರ ಮೇಲೆ ದೌರ್ಜನ್ಯ ಸಲ್ಲದು. ಕಳೆದ ವರ್ಷ ಕಾಶ್ಮೀರದಲ್ಲಿ ಪ್ರತಿಭಟನೆ ನಡೆಸಿದವರ ಮೇಲೆ ನಡೆಸಿದ ದೌರ್ಜನ್ಯದಲ್ಲಿ ಹಲವು ಮಕ್ಕಳು ಅಂಧರಾಗಿದ್ದಾರೆ. ತಪ್ಪು ಕಾರ್ಯ ನಡೆಸುವವರಿಗೆ ಯಾರೂ ಆಶ್ರಯ ನೀಡುವುದಿಲ್ಲ. ಆದರೆ ಯಾವುದೇ ಕಠಿಣ ಕ್ರಮ ಕೈಗೊಳ್ಳುವ ಮೊದಲು ಸೂಕ್ತ ತನಿಖೆ ಅಗತ್ಯ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News