×
Ad

ಉಡುಪಿ: ನಿವೃತ್ತ ಬ್ಯಾಂಕ್ ನೌಕರರ ಸಂಘದಿಂದ ಆಸ್ಕರ್‌ಗೆ ಮನವಿ

Update: 2017-02-17 20:07 IST

ಉಡುಪಿ, ಫೆ.17: ತಮ್ಮ ಬಹುಕಾಲದ ಪ್ರಮುಖ ಬೇಡಿಕೆಗಳ ಕುರಿತ ಮನವಿ ಪತ್ರವನ್ನು ಉಡುಪಿ ಜಿಲ್ಲಾ ಬ್ಯಾಂಕ್ ನಿವೃತ್ತ ನೌಕರರ ಸಂಘದ ವತಿಯಿಂದ ಇಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಅವರಿಗೆ ಶುಕ್ರವಾರ ಇಲ್ಲಿ ಸಲ್ಲಿಸಲಾಯಿತು.

ಕಾಲಕಾಲಕ್ಕೆ ಪಿಂಚಣಿ ಪರಿಷ್ಕರಣೆ, ಕುಟುಂಬ ಪಿಂಚಣಿಯಲ್ಲಿ ಹೆಚ್ಚಳ ಹಾಗೂ 2002ರ ನವೆಂಬರ್ ಮೊದಲು ನಿವೃತ್ತರಾದವರಿಗೆ ಶೇ.100 ತುಟ್ಟಿಭತ್ಯೆ ನಿಶಸ್ತ್ರಿಕರಣ ಮುಂತಾದ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಅಖಿಲ ಭಾರತ ಬ್ಯಾಂಕ್ ನಿವೃತ್ತರ ಒಕ್ಕೂಟದ ರಾಷ್ಟ್ರೀಯ ಕಾರ್ಯಕ್ರಮದಂತೆ ರಾಜ್ಯಸಭಾ ಸದಸ್ಯರಿಗೆ ಅರ್ಪಿಸಲಾಯಿತು.

ಮೂಲ ಪಿಂಚಣಿ ಪರಿಷ್ಕರಣೆ ಆಗದೇ 21 ವರ್ಷ ಕಳೆದಿದೆ. ಅದೇ ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರಿಗೆ ಪ್ರತಿ ವೇತನ ಪರಿಷ್ಕರಣೆ ಜೊತೆಗೆ ಪಿಂಚಣಿ ಕೂಡಾ ಪರಿಷ್ಕರಣೆಯಾಗುತ್ತಿದೆ.ಕುಟುಂಬ ಪಿಂಚಣಿ ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರಿಗೆ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ನೌಕರರಿಗೆ ಕೊನೆಯ ಸಂಬಳದ ಮೂಲ ವೇತನದ ಶೇ.30ರಷ್ಟು ನೀಡುತಿದ್ದರೆ, ಬ್ಯಾಂಕ್ ನೌಕರರಿಗೆ ಕೇವಲ ಶೇ.15ನ್ನು ನೀಡಲಾಗುತ್ತಿದೆ. ಅಲ್ಲದೇ 2002ರ ಮೊದಲು ನಿವೃತ್ತರಾದವರಿಗೆ ತುಟಿಭತ್ಯೆಯಲ್ಲೂ ತಾರತಮ್ಯವಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮನವಿ ಸ್ವೀಕರಿಸಿದ ಆಸ್ಕರ್ ಫೆರ್ನಾಂಡೀಸ್ ಮಾತನಾಡಿ, ನಿಮ್ಮ ನ್ಯಾಯಯುತ ಬೇಡಿಕೆಗಳನ್ನು ಕೇಂದ್ರ ಸರಕಾರದ ಹಣಕಾಸು ಸಚಿವರ ಗಮನಕ್ಕೆ ತಂದು ಆದಷ್ಟು ಶೀಘ್ರದಲ್ಲಿ ಬೇಡಿಕೆಗಳನ್ನು ಈಡೇರಿಸುವ ಆಶ್ವಾಸನೆ ನೀಡಿದರು.

ನಿಯೋಗದಲ್ಲಿ ಉಡುಪಿ ಜಿಲ್ಲಾ ಬ್ಯಾಂಕ್ ನಿವೃತ್ತರ ಸಂಘದ ಅದ್ಯಕ್ಷ ಪಿ. ರಾಘವೇಂದ್ರ ರಾವ್, ಕಾರ್ಯದರ್ಶಿ ಯು.ಶಿವರಾಯ ಹಾಗೂ ವಿವಿಧ ಬ್ಯಾಂಕುಗಳ ನಿವೃತ್ತರ ಸಂಘದ ಪದಾಧಿಕಾರಿಗಳಾದ ಕೆ.ವಿ.ಭಟ್, ರಾಮಮೋಹನ್, ಶೇಶಪ್ಪ, ಸಿ.ಎಸ್.ನಂಬಿಯಾರ್, ಸದಾನಂದ ಶೆಟ್ಟಿ, ಗೋಪಾಲ್ ಕಾಮತ್, ಭಾಸ್ಕರ ಶೆಣೈ ಹಾಗೂ ಕೆ.ಎಸ್.ಬಲ್ಲಾಳ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News