ಎಚ್-1ಬಿ ವೀಸಾ ವ್ಯವಸ್ಥೆಯಲ್ಲಿ ಸುಧಾರಣೆಗೆ ಅಮೆರಿಕ ಸೆನೆಟರ್ ಕರೆ
ವಾಶಿಂಗ್ಟನ್, ಫೆ. 17: ಅಮೆರಿಕದಲ್ಲಿರುವ ಮಾಹಿತಿ ತಂತ್ರಜ್ಞಾನ ಪರಿಣತರ ಬೃಹತ್ ಕೊರತೆಯನ್ನು ನೀಗಿಸಲು ಇತರ ದೇಶಗಳಿಂದ ಅತ್ಯಂತ ಪರಿಣತ ಕೆಲಸಗಾರರನ್ನು ತರಲು ಸಾಧ್ಯವಾಗುವಂತೆ ಎಚ್-1ಬಿ ವೀಸಾ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕು ಎಂದು ಅಮೆರಿಕದ ಓರ್ವ ಉನ್ನತ ಸೆನೆಟರ್ ಹೇಳಿದ್ದಾರೆ.
‘‘ಕೊರತೆಯನ್ನು ನೀಗಿಸುವುದಕ್ಕಾಗಿ ಇತರ ದೇಶಗಳಿಂದ ಅತ್ಯಂತ ಪರಿಣತ ಉದ್ಯೋಗಿಗಳನ್ನು ನಮ್ಮ ದೇಶಕ್ಕೆ ತರಲು ಎಚ್-1ಬಿ ವೀಸಾ ಎಂಬ ವ್ಯವಸ್ಥೆಯನ್ನು ನಾವು ಹೊಂದಿದ್ದೇವೆ. ಆದರೆ, ಆ ವ್ಯವಸ್ಥೆ ಈಗ ಹಳೆಯದಾಗಿದೆ ಹಾಗೂ ಮಾರುಕಟ್ಟೆ ಬೇಡಿಕೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ’’ ಎಂದು ಇಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಉಟಾಹ್ ರಾಜ್ಯದ ರಿಪಬ್ಲಿಕನ್ ಸೆನೆಟರ್ ಆರಿನ್ ಹ್ಯಾಚ್ ಹೇಳಿದರು.
2018ರ ವೇಳೆಗೆ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ವಿಷುಯಗಳಲ್ಲಿ ಪದವಿ ಹೊಂದಿರುವ 2.2 ಲಕ್ಷಕ್ಕೂ ಅಧಿಕ ನೌಕರರ ಕೊರತೆಯನ್ನು ಅಮೆರಿಕ ಎದುರಿಸುತ್ತದೆ ಎಂಬುದಾಗಿ ಸಂಶೋಧಕರು ಅಂದಾಜಿಸಿದ್ದಾರೆ ಎಂದು ಅವರು ನುಡಿದರು.
ಇದಿ ಉತ್ಪಾದಕತೆ ನಾಶ, ಹೊಸತನದ ಆವಿಷ್ಕಾರದ ನಾಶ ಮತ್ತು ಕಡಿಮೆ ಬಲಿಷ್ಠ ಆರ್ಥಿಕತೆಗೆ ಕಾರಣವಾಗುತ್ತದೆ ಎಂಬ ಭೀತಿಯನ್ನು ಅವರು ವ್ಯಕ್ತಪಡಿಸಿದರು.
ಅದೇ ವೇಳೆ, ಅಮೆರಿಕನ್ ಉದ್ಯೋಗಿಗಳ ಸಂಬಳ ಕಡಿತ ಮಾಡಲು ಅಥವಾ ಅವರನ್ನು ಕೆಲಸದಿಂದ ತೆಗೆಯಲು ಈ ವ್ಯವಸ್ಥೆಯನ್ನು ಬಳಸಬಾರದು ಎಂಬುದಾಗಿಯೂ ಅವರು ಎಚ್ಚರಿಸಿದರು.