ದಲಾಯಿ ಲಾಮಾಗೆ ಆಹ್ವಾನ ವಾಪಸ್ ಇಲ್ಲ : ಚೀನಿ ವಿದ್ಯಾರ್ಥಿಗಳ ಕೋರಿಕೆ ತಳ್ಳಿಹಾಕಿದ ಕುಲಪತಿ
ಬೀಜಿಂಗ್, ಫೆ. 17: ಅಮೆರಿಕದ ‘ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯ ಸ್ಯಾನ್ ಡೀಗೊ’ (ಯುಸಿಎಸ್‌ಡಿ)ಗೆ ಬರಲು ಟಿಬೆಟ್‌ನ ದೇಶಭ್ರಷ್ಟ ಆಧ್ಯಾತ್ಮಿಕ ನಾಯಕ ದಲಾಯಿ ಲಾಮಾಗೆ ನೀಡಿರುವ ಆಹ್ವಾನವನ್ನು ಹಿಂದಕ್ಕೆ ಪಡೆಯುವಂತೆ ಚೀನೀ ವಿದ್ಯಾರ್ಥಿಗಳು ಮಾಡಿರುವ ಮನವಿಯನ್ನು ಭಾರತೀಯ ಮೂಲದ ಉಪಕುಲಪತಿ ಪ್ರದೀಪ್ ಕೆ. ಕೋಸ್ಲಾ ತಿರಸ್ಕರಿಸಿದ್ದಾರೆ.
ಆದರೆ, ದಲಾಯಿ ಲಾಮಾ ವಿಶ್ವವಿದ್ಯಾನಿಲಯದಲ್ಲಿ ರಾಜಕೀಯ ಭಾಷಣ ಮಾಡುವುದಿಲ್ಲ ಎಂಬ ಭರವಸೆಯನ್ನು ಅವರು ನೀಡಿದ್ದಾರೆ.
ಉಪಕುಲಪತಿಯವರು ಚೈನೀಸ್ ಯೂನಿಯನ್, ಚೈನೀಸ್ ಸ್ಟೂಡೆಂಟ್ಸ್ ಆ್ಯಂಡ್ ಸ್ಕಾಲರ್ಸ್ ಅಸೋಸಿಯೇಶನ್ (ಸಿಎಸ್‌ಎಸ್‌ಎ) ಮತ್ತು ಚೈನೀಸ್ ಬಿಝ್ನೆಸ್ ಸೊಸೈಟಿ ಎಂಬ ಮೂರು ವಿದೇಶಿ ಚೀನಿ ವಿದ್ಯಾರ್ಥಿಗಳ ಸಂಘಟನೆಗಳನ್ನು ಪ್ರತಿನಿಧಿಸುವ ಗುಂಪುಗಳನ್ನು ಭೇಟಿಯಾದರು ಎಂದು ಚೀನಾದ ಸರಕಾರಿ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ಶುಕ್ರವಾರ ವರದಿ ಮಾಡಿದೆ.
ವಿಶ್ವವಿದ್ಯಾನಿಲಯದಲ್ಲಿ ಜೂನ್‌ನಲ್ಲಿ ನಡೆಯಲಿರುವ ಪದವಿ ಪ್ರದಾನ ಸಮಾರಂಭದಲ್ಲಿ ದಲಾಯಿ ಲಾಮಾ ಭಾಷಣ ಮಾಡಲಿದ್ದಾರೆ.
ಅವರಿಗೆ ನೀಡಿರುವ ಆಹ್ವಾನವನ್ನು ಹಿಂದಕ್ಕೆ ಪಡೆಯಲು ಉಪಕುಲಪತಿ ನಿರಾಕರಿಸಿದರು. ಆದರೆ ಅವರ ಭಾಷಣವು ರಾಜಕೀಯಕ್ಕೆ ಸಂಬಂಧಪಟ್ಟಿರುವುದಿಲ್ಲ ಎಂಬ ಭರವಸೆಯನ್ನು ನೀಡಿದರು ಎಂದು ಪತ್ರಿಕೆ ಹೇಳಿದೆ.