23ರಂದು ಉಜ್ರೆ ಈಶ್ವರ ಭಟ್‌ರ ಕೃತಿ "ನಾನೂ ಮಾಜಿಯಾದೆ" ಲೋಕಾರ್ಪಣೆ
ಮಂಗಳೂರು, ಫೆ. 17: ನಾಟಕ, ಯಕ್ಷಗಾನ, ಹರಿಕಥೆ ಸಹಿತ ಸಾಹಿತ್ಯ ಅಭಿರುಚಿಯುಳ್ಳ ಮಂಜೇಶ್ವರ ತಾಲೂಕು, ಕಳಿಯೂರು ಗ್ರಾಮದ ಉಜ್ರೆಯ ಈಶ್ವರ ಭಟ್ ಅವರ ಕೃತಿ "ನಾನೂ ಮಾಜಿಯಾದೆ" ಫೆಬ್ರವರಿ 23ರಂದು ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ಬಿಡುಗಡೆಗೊಳ್ಳಲಿದೆ.
ಮಂಗಳೂರಿನ ಸರಕಾರಿ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಉಜ್ರೆ ಈಶ್ವರ ಭಟ್ಟರು ಮುಂಬೈಯಲ್ಲಿ ಎಂ.ಎ.ಪದವಿ ಹಾಗೂ ಕಾನೂನು ವ್ಯಾಸಂಗ ಪೂರೈಸಿದ ಬಳಿಕ ಕಾಸರಗೋಡಿನಲ್ಲಿ ವಕೀಲ ವೃತ್ತಿಯಲ್ಲಿ ತೊಡಗಿದ್ದರು. ಕಾಸರಗೋಡಿನಲ್ಲಿ ಕನ್ನಡ ಪರ ಹೋರಾಟದಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದ ಭಟ್ಟರು, ರಾಜಕೀಯ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದವರು. ಯಕ್ಷಗಾನ ಕಲಾವಿದನಾಗಿ, ಅರ್ಥಧಾರಿಯಾಗಿಯೂ ಹೆಸರು ಮಾಡಿದ್ದ ಇವರು ತಮ್ಮ ಆತ್ಮಕತೆಯನ್ನು ಪುಸ್ತಕ ರೂಪದಲ್ಲಿ ಹೊರತರುವ ಮೂಲಕ ಕನ್ನಡ ಸಾರಸ್ವತ ಲೋಕಕ್ಕ್ಕೆ ಕೊಡುಗೆ ನೀಡಿದ್ದಾರೆ.
ಫೆ.23ರಂದು ಸಂಜೆ 4.30ಕ್ಕೆ ಕದ್ರಿ ಕಂಬಳ ರಸ್ತೆಯ, ಮಲ್ಲಿಕಾ ಬಡಾವಣೆ, ಮಂಜುಪ್ರಸಾದ ನಿವಾಸದ ಱವಾದಿರಾಜ ಮಂಟಪೞದಲ್ಲಿ ಕೃತಿ ಬಿಡುಗಡೆ ಸಮಾರಂಭ ಜರಗಲಿದ್ದು, ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ಹಾಗೂ ಪ್ರಸಿದ್ಧ ಸಾಹಿತಿ ಡಾ. ನಾ. ಮೊಗಸಾಲೆ ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಅತಿಥಿಗಳಾಗಿ ಹರಿಕಥಾ ಪರಿಷತ್‌ನ ಅಧ್ಯಕ್ಷ ಹಾಗೂ ನ್ಯಾಯವಾದಿ ಕೆ. ಮಹಾಬಲ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.