ಕಟೀಲು: ದುರ್ಗಾ ಸಂಜೀವನಿ ಚಾರಿಟೇಬಲ್ ಹಾಸ್ಪಿಟಲ್‌ಗೆ ನಾಳೆ ಶಿಲಾನ್ಯಾಸ
ಮಂಗಳೂರು, ಫೆ.17: ಮುಂಬೈಯ ಸಂಜೀವನಿ ಟ್ರಸ್ಟ್ ಕಟೀಲಿನ ಅಜಾರಿನಲ್ಲಿ ಸ್ಥಾಪಿಸಲುದ್ದೇಶಿಸಿರುವ ಅತ್ಯಾಧುನಿಕ ಸವಲತ್ತುಗಳುಳ್ಳ 25 ಕೋ.ರೂ. ವೆಚ್ಚದ 100 ಹಾಸಿಗೆಗಳ ನೂತನ ಆಸ್ಪತ್ರೆ ‘ದುರ್ಗಾ ಸಂಜೀವನಿ ಚಾರಿಟೇಬಲ್ ಹಾಸ್ಪಿಟಲ್’ಗೆ ಫೆ.19ರಂದು ಅಪರಾಹ್ನ 3 ಗಂಟೆಗೆ ಶಿಲಾನ್ಯಾಸ ನೆರವೇರಲಿದೆ.
ಈ ಬಗ್ಗೆ ಇಂದು ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಜೀವನಿ ಟ್ರಸ್ಟ್‌ನ ಆಡಳಿತ ಟ್ರಸ್ಟಿ ಡಾ.ಸುರೇಶ್ ಎಸ್.ರಾವ್ ಕಟೀಲು, ಮಣಿಪಾಲ ವಿವಿ ಹಾಗೂ ಸಂಜೀವನಿ ಟ್ರಸ್ಟ್ ವತಿಯಿಂದ ಕಟೀಲು ಶ್ರೀ ಕ್ಷೇತ್ರ ದುರ್ಗಾಪರಮೇಶ್ವರಿ ದೇವಳದ ಸಹಯೋಗದೊಂದಿಗೆ ಸ್ಥಾಪಿಸಲಾಗುವ ನೂತನ ಆಸ್ಪತ್ರೆಗೆ ಕೇಂದ್ರ ಆರೋಗ್ಯ ಸಚಿವ ಜಗತ್ ಪ್ರಕಾಶ್ ನಡ್ಡಾ ಹಾಗೂ ರಾಜ್ಯ ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್ ಶಿಲಾನ್ಯಾಸ ನೆರವೇರಿಸುವರು. ಉಡುಪಿಯ ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡುವರು. ಶಾಸಕ ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸುವರು.
ಕಟೀಲು ದೇವಳದ ವಂಶಿಕ ವಿಶ್ವಸ್ಥ ಮತ್ತು ಪ್ರಧಾನ ಅರ್ಚಕ ಕೆ.ವಾಸುದೇವ ಅಸ್ರಣ್ಣ, ಅರ್ಚಕರಾದ ಕೆ.ಲಕ್ಷ್ಮೀನಾರಾಯಣ ಅಸ್ರಣ್ಣ ಮತ್ತು ಕೆ.ಅನಂತ ಪದ್ಮನಾಭ ಅಸ್ರಣ್ಣ, ಸಚಿವರಾದ ರಮಾನಾಥ ರೈ, ಯು.ಟಿ.ಖಾದರ್, ಪ್ರಮೋದ್ ಮಧ್ವರಾಜ್, ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಶಾಸಕರಾದ ವಿನಯಕುಮಾರ್ ಸೊರಕೆ, ಮೊಯ್ದಿನ್ ಬಾವ ಮತ್ತಿತರರು ಭಾಗವಹಿಸುವರು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಎಂಸಿ ಆಸ್ಪತ್ರೆಯ ಮಂಗಳೂರು ಡೀನ್ ಡಾ.ವೆಂಕಟ್ರಾಯ ಪ್ರಭು, ಹರಿನಾರಾಯಣ ಅಸ್ರಣ್ಣ ಕಟೀಲು ಉಪಸ್ಥಿತರಿದ್ದರು.
***ದುರ್ಗಾ ಸಂಜೀವಿನಿ ಚಾರಿಟೇಬಲ್ ಹಾಸ್ಪಿಟಲ್ ಯೋಜನೆಯ ಒಡಂಬಡಿಕೆಗೆ ಮಣಿಪಾಲ ವಿವಿ ಮತ್ತು ಸಂಜೀವನಿ ಚಾರಿಟೇಬಲ್ ಟ್ರಸ್ಟ್ ಕಳೆದ ಡಿಸೆಂಬರ್‌ನಲ್ಲಿ ಸಹಿ ಹಾಕಿವೆ. ಆರ್ಥಿಕವಾಗಿ ಹಿಂದುಳಿದವರಿಗಾಗಿ ಸಂಜೀವನಿ ಚಾರಿಟೇಬಲ್ ಟ್ರಸ್ಟ್ ಸುಮಾರು 25 ಕೋ.ರೂ. ವೆಚ್ಚದಲ್ಲಿ ಈ ಆಸ್ಪತ್ರೆಯನ್ನು ನಿರ್ಮಿಸಲಿದೆ. ಮಣಿಪಾಲ ವಿಶ್ವವಿದ್ಯಾನಿಲಯ ಸಮೂಹವು ಆಸ್ಪತ್ರೆಗೆ ಸುಸಜ್ಜಿತ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿ ಸೇವಾಡಳಿತ ನಡೆಸಲಿದೆ.
-ಡಾ.ಸುರೇಶ್ ಎಸ್.ರಾವ್, ಸಂಜೀವನಿ ಟ್ರಸ್ಟ್‌ನ ಆಡಳಿತ ಟ್ರಸ್ಟಿ