ಫೆ.22-23ರಂದು ‘ಶ್ರೀದೇವಿ ಸಂಭ್ರಮ-2017’
ಮಂಗಳೂರು, ಫೆ.17: ಕೆಂಜಾರಿನಲ್ಲಿರುವ ಶ್ರೀದೇವಿ ಶಿಕ್ಷಣ ಸಂಸ್ಥೆಯ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಷ್ಟ್ರ ಮಟ್ಟದ ತಾಂತ್ರಿಕ ಹಾಗೂ ಸಾಂಸ್ಕೃತಿಕ ಉತ್ಸವ ‘ಶ್ರೀದೇವಿ ಸಂಭ್ರಮ-2017’, ಎಕ್ಲೋನ್-17 ಮತ್ತು ಮೇಧಾ-17ರ ಕಾರ್ಯಕ್ರಮವು ಫೆ.22 ಮತ್ತು 23 ರಂದು ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ದಿಲೀಪ್‌ಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
‘ಶ್ರೀದೇವಿ ಸಂಭ್ರಮ’ವು ಪದವಿ ವಿದ್ಯಾರ್ಥಿಗಳ ತಾಂತ್ರಿಕ ಪರಿಣಿತ ಹಾಗೂ ಸಾಂಸ್ಕೃತಿಕ ಪ್ರತಿಭೆಯನ್ನು ಪ್ರದರ್ಶಿಸುವ ವೇದಿಕೆಯಾದರೆ, ‘ಎಕ್ಲೋನ್-17’ ಪದವಿ-ಸ್ನಾತಕೋತ್ತರ ಪದವೀಧರರಿಗಾಗಿ ರಾಷ್ಟ್ರ ಮಾಹಿತಿ ಉದ್ಯಮಾಡಳಿತೋತ್ಸವ ಹಾಗೂ ‘ಮೇಧಾ-17’ ಮಾಹಿತಿ ತಂತ್ರಜ್ಞಾನೋತ್ಸವವಾಗಿದೆ ಎಂದು ತಿಳಿಸಿದರು.
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಉಪಕುಲಪತಿ ಡಾ.ಕರಿಸಿದ್ದಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸುವರು.
ಸ್ಪರ್ಧಾ ವಿಜೇತರಿಗೆ ಸುಮಾರು ಆರು ಲಕ್ಷ ರೂ.ವರೆಗೆ ಬಹುಮಾನ ಸಿಗಲಿದೆ. ಈ ಉತ್ಸವಗಳಲ್ಲಿ ದೇಶಾದ್ಯಂತದ ಸುಮಾರು 100 ಕಾಲೇಜುಗಳಿಂದ 3,000ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ಫೆ.23ರಂದು ಸಂಜೆ 7ಕ್ಕೆ ಖ್ಯಾತ ಗಾಯಕ ರಘು ದೀಕ್ಷಿತ್ ಮತ್ತು ತಂಡ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ನಿರ್ದೇಶಕ ಡಾ.ಕೆ.ಇ.ಪ್ರಕಾಶ್, ಸಂಯೋಜಕರಾದ ಪ್ರೊ. ನೇತ್ರಾವತಿ ಪಿ.ಎಸ್., ಪ್ರೊ. ವೆಂಕಟೇಶ್ ಎ.ಎಸ್., ಪ್ರೊ. ಸವಿತಾ ಜೆ. ಉಪಸ್ಥಿತರಿದ್ದರು.