×
Ad

ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ಮೋದಿಯ 'ಛೋಟಾ ಭಾಯ್ ' ಯಿಂದ ನಾಮಪತ್ರ !

Update: 2017-02-18 16:20 IST

ವಾರಾಣಸಿ, ಫೆ. 18 : ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಗುರುವಾರ ನಾಮಪತ್ರ ಸಲ್ಲಿಸಿದ ಒಬ್ಬ ಅಭ್ಯರ್ಥಿಯನ್ನು ನೋಡಿ ಎಲ್ಲರಿಗೂ ಅಚ್ಚರಿ. ಈ ವ್ಯಕ್ತಿ ಬೇರಾರೂ ಅಲ್ಲ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ' ಛೋಟಾ ಭಾಯ್ ' ಅಭಿನಂದನ್ ಪಾಠಕ್ ! 

ವಾರಾಣಸಿ ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ  ವಿರುದ್ಧ ಪಾಠಕ್ ಕಣಕ್ಕಿಳಿದಿದ್ದಾರೆ. ವಿಶೇಷವೆಂದರೆ ತಮ್ಮನ್ನು ಮೋದಿ ಅವರ ಛೋಟಾ ಭಾಯ್ ( ತಮ್ಮ ) ಎಂದು ಹೇಳಿಕೊಳ್ಳುವ ಪಾಠಕ್ ನೋಡಲು ಥೇಟ್ ಮೋದಿಯಂತೆಯೇ ಇದ್ದಾರೆ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ತನ್ನನ್ನು ಮೋದಿಯ ಅಭಿಮಾನಿ ಹಾಗು ಭಕ್ತ ಎಂದು ಅವರ ಪರವಾಗಿ ಸಾಕಷ್ಟು ಪ್ರಚಾರ ಮಾಡಿದವರು ಈ ಪಾಠಕ್. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಈಗ ಅವರು ಬಿಜೆಪಿಯ ವಿರುದ್ಧವೇ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಪಾಠಕ್ ಕೇಂದ್ರ ಸಚಿವ ರಾಮ್ ದಾಸ್ ಆಠವಲೆ ಅವರ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ದಿಂದ ಸ್ಪರ್ಧಿಸಿದ್ದಾರೆ ಎಂದು ಹೇಳಲಾಗಿದೆ . ಅದು ಖಚಿತಗೊಂಡಿಲ್ಲ. 

ಉತ್ತರ ಪ್ರದೇಶದ ಷಹಜಹಾಪುರದವರಾದ ಪಾಠಕ್ ನೋಡಲು ಮಾತ್ರವಲ್ಲ ಧ್ವನಿಯಲ್ಲೂ ಪ್ರಧಾನಿ ಮೋದಿಯನ್ನು ಹೋಲುತ್ತಾರೆ. ತಾನು ಡಾ. ಅಂಬೇಡ್ಕರ್ ಸ್ಥಾಪಿಸಿದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದಿಂದ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳುವ ಪಾಠಕ್ , ಈ ಪಕ್ಷದ ಚಿಹ್ನೆ ಆನೆಯನ್ನು ಬಿಎಸ್ಪಿ ಎಗರಿಸಿದೆ ಎಂದು ಆರೋಪಿಸುತ್ತಾರೆ. 

ಚುನಾವಣೆಯ ಬಳಿಕ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಬರಲಿದ್ದು ಅದರಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಹೇಳುವ ಪಾಠಕ್ ಇನ್ನೊಮ್ಮೆ ರಾಜ್ಯದಲ್ಲಿ ನನ್ನದೇ ಸರ್ಕಾರ ಬರಲಿದೆ ಎಂದೂ ಹೇಳುತ್ತಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News