ವಿದೇಶಿ ಮಾಲಿನ್ಯ ದೇಶದೊಳಗೆ ವಿಲೇವಾರಿ: ಸುಪ್ರೀಂಕೋರ್ಟಿನಿಂದ ಕೇಂದ್ರಕ್ಕೆ ತರಾಟೆ
ಹೊಸದಿಲ್ಲಿ,ಫೆ. 18: ಇತರದೇಶಗಳ ಅಪಾಯಕಾರಿ ಮಾಲಿನ್ಯಗಳನ್ನು ಭಾರತದ ವಿವಿಧ ಸ್ಥಳಗಳಲ್ಲಿ ವಿಲೇವಾರಿಗೆ ಅನುಮತಿ ನೀಡಿದ ಕೇಂದ್ರಸರಕಾರವನ್ನು ಸುಪ್ರೀಂಕೋರ್ಟು ಕಟುವಾಗಿ ಟೀಕಿಸಿದೆ. ಇತರದೇಶಗಳು ಹೊರಸಾಗಿಸುವ ಮಾಲಿನ್ಯಗಳ ಭಂಡಾರ ಜನರ ಜೀವಕ್ಕೆ ಹಾನಿಕರವೆಂದು ಗೊತ್ತಿದ್ದೂ ಅದನ್ನು ತೆಗೆದುಕೊಳ್ಳುವುದರ ಅರ್ಥವೇನು ಎಂದು ಮುಖ್ಯನ್ಯಾಯಾಧೀಶ ಜೆ.ಎಸ್. ಕೇಹರ್ ಅಧ್ಯಕ್ಷತೆಯ ಸುಪ್ರೀಂಕೋರ್ಟು ಪೀಠ ಪ್ರಶ್ನಿಸಿದೆ.
ಗಂಭೀರವಾದ ಈ ವಿಷಯದಲ್ಲಿ ನಾಲ್ಕು ವಾರಗಳೊಳಗೆ ಸಂಪೂರ್ಣ ವಿವರಗಳಿರುವ ಅಫಿದಾವಿತ್ ಸಲ್ಲಿಸಬೇಕೆಂದು ಕೋರ್ಟು ಕೇಂದ್ರಸರಕಾರಕ್ಕೆ ಸೂಚಿಸಿದೆ. ಒಂದು ಸ್ವಯಂಸೇವಾ ಸಂಘಟನೆ ನೀಡಿದ ಅರ್ಜಿಯಲ್ಲಿ ಕೋರ್ಟು ಕೇಂದ್ರ ಸರಕಾರದ ತೀರ್ಮಾನವನ್ನು ವಿಮರ್ಶಿಸಿದೆ.
ಮಾಲಿನ್ಯ ಸಮಸ್ಯೆ ಕುರಿತು ಹಲವಾರು ಕಾನೂನುಗಳು ಜಾರಿಯಲ್ಲಿವೆ. ಇವುಗಳನ್ನು ಉಲ್ಲಂಘಿಸಿ ಇತರದೇಶಗಳ ಮಾಲಿನ್ಯವನ್ನು ಹಣ ಪಡೆದು ಇಲ್ಲಿ ಬಿಸಾಕಲು ಕೇಂದ್ರ ಸರಕಾರ ಅನುಮತಿ ಕೊಟ್ಟಿದೆಯೇ ಎಂಬುದನ್ನು ಕೇಂದ್ರಸರಕಾರ ಸ್ಪಷ್ಟ ಪಡಿಸಬೇಕೆಂದು ಜಸ್ಟಿಸ್ ಎನ್. ವಿ. ರಮಣ, ಡಿ.ವೈ, ಚಂದ್ರಚೂಡ, ಎಸ್.ಕೆ. ಕೌಲ್‌ರನ್ನೊಳಗೊಂಡ ಪೀಠ ಆದೇಶಿಸಿದೆ ಎಂದು ವರದಿಯಾಗಿದೆ.