ಸುಳ್ಯ: ಎನ್ನೆಂಸಿಯಲ್ಲಿ ಫೆ.22ರಂದು ರಾಷ್ಟ್ರಮಟ್ಟದ ವಿಚಾರ ಸಂಕಿರಣ
ಸುಳ್ಯ, ಫೆ.18: ನೆಹರೂ ಮೆಮೋರಿಯಲ್ ಕಾಲೇಜು, ಸುಳ್ಯ ಇದರ ವಿಜ್ಞಾನ ವಿಭಾಗದ ಆಶ್ರಯದಲ್ಲಿ ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಸಸ್ಯಶಾಸ್ತ್ರ ಅಧ್ಯಾಪಕರ ಸಂಘ ವನಶ್ರೀ ಇವುಗಳ ಸಂಯೋಜಕತ್ವದಲ್ಲಿ 'ಸಾಂಪ್ರದಾಯಿಕ ವಿಜ್ಞಾನ' ಎಂಬ ವಿಷಯದ ಬಗ್ಗೆ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ.
ಫೆಬ್ರವರಿ 22ರಂದು ಯುಜಿಸಿ ಪ್ರಾಯೋಜಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎನ್ನೆಂಸಿ ಪ್ರಾಂಶುಪಾಲ ಪ್ರೊ. ಗಿರಿಧರ ಗೌಡ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್‌ನ ಅಧ್ಯಕ್ಷರಾದ ಡಾ. ಕೆ.ವಿ ಚಿದಾನಂದ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳ ಗಂಗೋತ್ರಿ ಇಲ್ಲಿನ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಕೆ.ಆರ್ ಚಂದ್ರಶೇಖರ್ ಉದ್ಘಾಟಿಸಲಿದ್ದಾರೆ.
ಪ್ರಥಮ ಗೋಷ್ಠಿಯಲ್ಲಿ ಸರಕಾರಿ ಸ್ವಾಯತ್ತ ಕಲಾ ಮತ್ತು ವಿಜ್ಞಾನ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಜಯಕರ ಭಂಡಾರಿಯವರು ಸಾಂಪ್ರದಾಯಿಕ ವಿಜ್ಞಾನ-ಪ್ರಸ್ತುತ ಮತ್ತು ಭವಿಷ್ಯದ ನಿರೀಕ್ಷೆಗಳುಎಂಬ ವಿಷಯವಾಗಿ, ದ್ವಿತೀಯ ಗೋಷ್ಠಿಯಲ್ಲಿ ಔಷದೀಯ ಕ್ಷೇತ್ರದ ಬೆಳವಣಿಗೆಯಲ್ಲಿ ಸಾಂಪ್ರದಾಯಿಕ ವಿಜ್ಞಾನದ ಪಾತ್ರ ಎಂಬ ವಿಷಯವಾಗಿ ಕೇರಳದ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ. ಗುರುಶಂಕರ ಪಿ. ಇವರು ವಿಚಾರ ಮಂಡಿಸಲಿದ್ದಾರೆ.
ವಿಚಾರ ಸಂಕಿರಣದಲ್ಲಿ ಭಾಗವಹಿಸುವವರಿಗೆ ತಮ್ಮ ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸಲು ಹಾಗೂ ಭಿತ್ತಿಪತ್ರ ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಅಪರಾಹ್ನದ ಗೋಷ್ಠಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕೈಗಾರಿಕಾ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಬಿ.ಕೆ ಸರೋಜಿನಿಯವರು ಸಾಂಪ್ರದಾಯಿಕ ವಿಜ್ಞಾನದಲ್ಲಿ ಸಂಶೋಧನಾ ಸಾಧ್ಯತೆಗಳು ಎಂಬ ವಿಷಯದಲ್ಲಿ ಮಾತನಾಡಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಶ್ರೀ ದಿನೇಶ್ ನಾಯಕ್ ಎಂ, ವಿಟ್ಲ ಇವರು ಶಿಖರೋಪನ್ಯಾಸ ನೀಡಲಿದ್ದು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಖಜಾಂಜಿ ಶ್ರೀಮತಿ ಶೋಭಾ ಚಿದಾನಂದರು ಉಪಸ್ಥಿತರಿರುತ್ತಾರೆ. ಆಸಕ್ತ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾಥಿಗಳು, ವೈದ್ಯರು ಹಾಗೂ ವಿಜ್ಞಾನ ವಿದ್ಯಾರ್ಥಿಗಳು ಭಾಗವಹಿಸಬಹುದು ಎಂದು ಕಾರ್ಯಕ್ರಮ ಸಂಯೋಜಕರಾದ ಕುಲದೀಪ್ ಪೆಲ್ತಡ್ಕ ಮತ್ತು ಪ್ರಾಂಶುಪಾಲರಾದ ಡಾ. ಕೆ. ಗಿರಿಧರ ಗೌಡರು ತಿಳಿಸಿದರು.
ಉಪನ್ಯಾಕರಾದ ಕುಲದೀಪ್ ಪೆಲ್ತಡ್ಕ, ಶಕೀರಾ , ಪೂವಪ್ಪ ಕಣಿಯೂರು, ಡಿ.ಸತ್ಯಪ್ರಕಾಶ್ ಪತ್ರಿಕಾಗೋಷ್ಟಿಯಲ್ಲಿದ್ದರು.