ಮಂಗಳೂರು: ಸೋಲಾರ್ ಅಭಿಯಾನಕ್ಕೆ ಚಾಲನೆ
ಮಂಗಳೂರು, ಫೆ.18: ರಾಜ್ಯ ವಿಧಾನ ಪರಿಷತ್ ಮುಖ್ಯಸಚೇತಕ ಐವನ್ ಡಿಸೋಜ ಹಮ್ಮಿಕೊಂಡ ಸೋಲಾರ್ ಅಭಿಯಾನಕ್ಕೆ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಶನಿವಾರ ಕಂಕನಾಡಿಯ ಸಂತ ಜೋಸೆಫ್ ಹಿ.ಪ್ರಾ.ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ದೇಶದಲ್ಲಿ ವಿದ್ಯುತ್ ಉತ್ಪಾದನೆಗೆ ಅನೇಕ ಅಡ್ಡಿಗಳು ಅತಂಕಗಳು ಇವೆ. ಆದರೂ ಸೌರಶಕ್ತಿ ಮತ್ತು ವಾಯು ವಿದ್ಯುತ್ ಉತ್ಪಾದಿಸುವ ಕಾರ್ಯದಲ್ಲಿ ಭಾರತ ದೇಶ ಇತರ ದೇಶಗಳಿಗಿಂತ ಹೆಚ್ಚು ಸ್ವಾವಲಂಬಿಯಾಗಲು ಅವಕಾಶವಿದೆ. ವಿದ್ಯುತ್ ಉತ್ಪಾದನೆಗೆ ಅನೇಕ ಯೋಜನೆ ರೂಪಿಸುವ ಕೇಂದ್ರ ಸಂಸದೀಯ ಉಪಸಮಿತಿಗಳು ನೀಡಿದ ವರದಿಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರಕಾರ ಮುಂದಾಗಬೇಕು ಎಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೇಯರ್ ಹರಿನಾಥ್ ಮನಪಾದಲ್ಲಿ ಸೌರಶಕ್ತಿ ಘಟಕವನ್ನು ಅಳವಡಿಸಲು ಟೆಂಡರ್ ಕರೆಯಲಾಗಿದೆ ಎಂದರು.
ಸೌರಶಕ್ತಿ ಮೇಲ್ಛಾವಣಿ ವಿದ್ಯುತ್ ಉತ್ಪಾದನೆಯಲ್ಲಿ ದ.ಕ. ಜಿಲ್ಲೆ 2ನೆ ಸ್ಥಾನದಲ್ಲಿದೆ ಎಂದು ಐವನ್ ಡಿಸೋಜ ಹೇಳಿದರು. ಮುಡಾ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಸಿಸ್ಟರ್ ವೀಣಾ ಅರಾನ್ಹ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮನಪಾ ಸಚೇತಕ ಶಶಿಧರ್ ಹೆಗ್ಡೆ, ಕಾರ್ಪೊರೇಟರ್‌ಗಳಾದ ನವೀನ್ ಡಿಸೋಜ, ಭಾಸ್ಕರ್ ಮೊಯ್ಲಿ, ಡಿ.ಕೆ. ಅಶೋಕ್, ಪ್ರವೀಣ್‌ಚಂದ್ರ ಆಳ್ವ, ಜೆಸಿಂತಾ ವಿಜಯ ಆಲ್ಫ್ರೆಡ್, ಅಪ್ಪಿ, ಶೈಲಜಾ, ಕವಿತಾ ವಾಸು, ಆಶಾ ಡಿಸಿಲ್ವ, ಅಖಿಲಾ ಆಳ್ವ, ಅಬ್ದುರ್ರವೂಫ್, ಕೇಶವ ಮರೋಳಿ, ಸ್ಟೀಫನ್ ಮರೋಳಿ, ಮಾಜಿ ಸಂಸದ ಬಿ. ಇಬ್ರಾಹೀಂ, ಪದ್ಮನಾಭ ನರಿಂಗಾನ, ಮಾಜಿ ಕಾರ್ಪೊರೇಟರ್‌ಗಳಾದ ಗ್ರೆಟ್ಟಾ ಡಿಮೆಲ್ಲೊ, ನಾಗೇಂದ್ರ ಕುಮಾರ್, ಶಶಿಕಾಂತ್ ಶೆಟ್ಟಿ, ಮೋಂತು ಲೋಬೊ ಉಪಸ್ಥಿತರಿದ್ದರು.
ಐವನ್ ಡಿಸೋಜ ತನ್ನ ಪ್ರದೇಶಾಭಿವೃದ್ದಿ ನಿಧಿಯಿಂದ ಜಿಲ್ಲೆಯ 50 ಶಾಲೆಗಳಿಗೆ 3 ಕಿ.ವ್ಯಾಟ್‌ನ ಪ್ರತಿ ಘಟಕಕ್ಕೆ 2.75 ಲಕ್ಷ ರೂ.ನಂತೆ 1,37,00,750 ರೂ. ವೆಚ್ಚದಲ್ಲಿ ಯೋಜನೆಯನ್ನು ರೂಪಿಸಿದ್ದಾರೆ.
ಪ್ರಥಮ ಹಂತವಾಗಿ ಕಂಕನಾಡಿಯ ಸಂತ ಜೋಸೆಫ್ ಹಿ.ಪ್ರಾ. ಶಾಲೆ, ಪುತ್ತೂರು ಕಾವು ದ.ಕ.ಜಿಪಂ ಉನ್ನತೀಕರಿಸಿದ ಮಾದರಿ ಶಾಲೆ, ಬಂಟ್ವಾಳ ಸಿದ್ದಕಟ್ಟೆ ಹಾಗೂ ಕೊಯ್ಲ ಸರಕಾರಿ ಪ್ರೌಢಶಾಲೆ, ಮುಡಿಪು ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳಂದೂರು ಮತ್ತು ಸುಳ್ಯ ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ತಂಗಡಿಯ ಬಳಂಜ ಸರಕಾರಿ ಹಿ.ಪ್ರಾ.ಶಾಲೆ, ಶಕ್ತಿನಗರದ ಕುವೆಂಪು ಶತಮಾನೋತ್ಸವ ಮಾ.ಹಿ.ಪ್ರಾ. ಶಾಲೆ, ಕೊಂಚಾಡಿಯ ಶ್ರೀ ರಾಮಾಶ್ರಮ ಅನುದಾನಿತ ಪ್ರೌಢಶಾಲೆಗೆ ಸೋಲಾರ್ ಘಟಕ ಅಳವಡಿಸಲಾಗುತ್ತದೆ.