ಮಂಗಳೂರು: ಕರ್ನಾಟಕ ಒನ್ ನಾಗರಿಕ ಸೇವಾ ಕೇಂದ್ರ ಉದ್ಘಾಟನೆ
ಮಂಗಳೂರು, ಫೆ.18: ನಗರದ ವೆಲೆನ್ಸಿಯಾದ ಸಿಲ್ವಾ ಅಡ್ದ ರಸ್ತೆಯಲ್ಲಿರುವ ಬ್ಲೂ ಬರ್ಡ್ ಮ್ಯಾನರ್ ಕಟ್ಟಡದಲ್ಲಿ ಕರ್ನಾಟಕ ಒನ್ ನಾಗರಿಕ ಸೇವಾ ಕೇಂದ್ರವನ್ನು ಶಾಸಕ ಜೆ. ಆರ್. ಲೋಬೊ ಶನಿವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸರಕಾರ ಆಧಾರ್ ಕಾರ್ಡನ್ನು ಎಲ್ಲ ಸೇವೆಗೆ ಕಡ್ಡಾಯ ಮಾಡಿರುವುದರಿಂದ ಹೆಚ್ಚಿನ ಸೇವಾ ಕೇಂದ್ರಗಳಲ್ಲಿ ಜನರು ಸರದಿ ಸಾಲಿನಲ್ಲಿ ನಿಲ್ಲುತ್ತಿರುವುದು ಸಾಮಾನ್ಯವಾಗಿದೆ. ಹೊಸ ಕೇಂದ್ರ ಆರಂಭಿಸಿರುವುದರಿಂದ ಇದು ಕಡಿಮೆಯಾಗಬಹುದು. ಮನಪಾದ ಆಸ್ತಿ ತೆರಿಗೆ, ನೀರಿನ ಬಿಲ್ಲು ಇಲ್ಲಿ ಪಾವತಿಸಬಹುದು. ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಸೇವೆಗಳನ್ನು ಇಲ್ಲಿ ಪಡೆಯಬಹುದು.
ಮಂಗಳೂರು ಒನ್ ಕೇಂದ್ರಗಳಲ್ಲಿ ಮಾಡುವಂತಹ ಎಲ್ಲ ಸೇವೆಗಳನ್ನು ಇಲ್ಲಿ ಮಾಡಲಾಗುವುದು. ಇದು ನಗರದಲ್ಲಿರುವ 5ನೆ ಸೇವಾ ಕೇಂದ್ರವಾಗಿದೆ. ಈಗಾಗಲೇ ಲಾಲ್‌ಬಾಗ್, ಸುರತ್ಕಲ್, ಬಾವುಟಗುಡ್ಡೆ, ಕದ್ರಿಯಲ್ಲಿ ತನ್ನ ಸೇವೆಯನ್ನು ಸಲ್ಲಿಸುತ್ತಿದೆ. ಸೇವಾ ಕೇಂದ್ರ ತೆರೆದುದರಿಂದ ಅಸಂಖ್ಯಾತ ಜನರಿಗೆ ಸಾಕಷ್ಟು ಸಹಾಯವಾಗಲಿದೆ ಎಂದರು.
ಮೇಯರ್ ಹರಿನಾಥ್, ಮಾಜಿ ಮೇಯರ್‌ಗಳಾದ ಜೆಸಿಂತಾ ವಿಜಯಾ ಅಲ್ಫ್ರೆಡ್, ಶಶಿಧರ ಹೆಗ್ಡೆ, ಕಾರ್ಪೋರೇಟರ್‌ಗಳಾದ ಅಬ್ದುರ್ರವೂಫ್, ಶೈಲಜಾ, ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ. ಸುಧೀರ್, ಇಂಟಕ್ ನಾಯಕ ಸದಾಶಿವ ಶೆಟ್ಟಿ, ಕರ್ನಾಟಕ ಒನ್ ಜಿಲ್ಲಾ ಸಂಯೋಜಕ ನವೀನ್ ಶೆಟ್ಟಿ, ಶಾಖಾ ವ್ಯವಸ್ಥಾಪಕ ರೋಶನ್ ಕೆ.ವಿ. ಉಪಸ್ಥಿತರಿದ್ದರು. ವಿಜಯ ವಿಖ್ಯಾತ್ ರೈ ಕಾರ್ಯಕ್ರಮ ನಿರೂಪಿಸಿದರು.