ಕಾರ್ಕಳ: ಫೆ.21ರಂದು ಹಿರ್ಗಾನ ಚರ್ಚ್ ಬೆಳ್ಳಿಹಬ್ಬದ ಸಂಭ್ರಮ
ಕಾರ್ಕಳ, ಫೆ.18: ಹಿರ್ಗಾನ ಸಂತ ಮರಿಯಾ ಗೊರೆಟ್ಟಿ ಚರ್ಚಿನ ಬೆಳ್ಳಿ ಹಬ್ಬ ಸಂಭ್ರಮ ಆಚರಣಾ ಸಮಾರಂಭವನ್ನು ಫೆ.21ರಂದು ಹಮ್ಮಿಕೊಳ್ಳ ಲಾಗಿದೆ.
ಕಾರ್ಕಳ ಕ್ರೈಸ್ಟ್ ಕಿಂಗ್ ಚರ್ಚಿನ ಆಗಿನ ಧರ್ಮಗುರುಗಳಾಗಿದ್ದ ವಂ.ಜೊಕಿಂ ಇಮ್ಮಾನ್ಯವೆಲ್ ಡಿಸೋಜ ಹಿರ್ಗಾನ ಚರ್ಚಿನ ಕಾರಣಿಕರು. 1977ರಲ್ಲಿ ಸ್ಥಾಪನೆಗೊಂಡ ಈ ಚರ್ಚ್‌ಗೆ 1991ರ ಸೆ.15ರಂದು ಅಧಿಕೃತ ಮಾನ್ಯತೆ ದೊರೆಯಿತು. ಚರ್ಚ್‌ನಲ್ಲಿ ಪ್ರಸ್ತುತ 194 ಕುಟುಂಬಗಳಿದ್ದು, 8 ವಾಳೆಗಳನ್ನು ಹೊಂದಿದೆ.ಚರ್ಚಿನಿಂದ 5 ಧರ್ಮಗುರುಗಳು ಹಾಗು 11 ಧರ್ಮಭಗಿನಿ ಯರಾಗಿ ದೇಶ ವಿದೇಶಗಳಲ್ಲಿ ಸೇವೆ ನೀಡುತ್ತಿದ್ದಾರೆ.
ಬೆಳ್ಳಿಹಬ್ಬದ ಸವಿನೆನಪಿಗಾಗಿ ಚರ್ಚಿನ ಧರ್ಮಗುರು ವಂ.ಅನಿಲ್ ಕರ್ನೆ ಲಿಯೋ ಹಾಗೂ ಪಾಲನಾ ಮಂಡಳಿಯ ನೇತೃತ್ವದಲ್ಲಿ ಹಲವಾರು ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಚರ್ಚ್‌ನ ಪ್ರಧಾನ ವೇದಿಕೆಯ ನವೀಕರಣ, ಮಾಡಿನ ದುರಸ್ತಿ, ಹೊಸ ಗೋಡೆಗಳಿಗೆ ಪ್ಲಾಸ್ಟರಿಂಗ್ ಹಾಗೂ ಶಾಲೆಯ ಉಪಯೋಗಕ್ಕೆ ನೂತನ ಆಟದ ಮೈದಾನವನ್ನು ನಿರ್ಮಿಸಲಾಗಿದೆ.
ರಜತ ಮಹೋತ್ಸವದ ಆಚರಣೆಯು ಬೆಳಗ್ಗೆ 9:30ಕ್ಕೆ ಉಡುಪಿ ಧರ್ಮ ಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಪವಿತ್ರ ಬಲಿಪೂಜೆಯೊಂದಿಗೆ ಆರಂಭವಾಗಲಿದೆ. ಬಳಿಕ ಸಾರ್ವ ಜನಿಕ ಅಭಿನಂದನಾ ಸಮಾರಂಭ ಜರುಗಲಿದ್ದು, ಬಳಿಕ ಸಾರ್ವಜನಿಕ ಸಹಭೋಜನ ನಡೆಯಲಿದೆ.
ಸಂಜೆ 5:30ಕ್ಕೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಪ್ರಾಂತದ ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಡಾ.ಬ್ಯಾಪ್ಟಿಸ್ ಮಿನೇಜಸ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕಾರ್ಕಳ ಶಾಸಕ ಸುನಿಲ್ ಕುಮಾರ್, ಮಾಜಿ ಶಾಸಕ ಗೋಪಾಲ್ ಭಂಡಾರಿ, ಹಿರ್ಗಾನ ಗ್ರಾಪಂ ಅಧ್ಯಕ್ಷ ಸಂತೋಷ್ ಶೆಟ್ಟಿ, ಕುಕ್ಕುಂದೂರು ಗ್ರಾಪಂ ಅಧ್ಯಕ್ಷೆ ಸುಮನಾ ರಾವ್ ಭಾಗವಹಿಸಿಲಿದ್ದಾರೆ. ನಂತರ ತುಳು ಹಾಸ್ಯಮಯ ನಾಟಕ ಪೊಪ್ಪ ಪ್ರದರ್ಶನ ಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.