×
Ad

ರೋಹಿತ ದಲಿತನಾಗಿದ್ದ ಎನ್ನುವುದನ್ನು ಸ್ಪಷ್ಟಪಡಿಸಿದ್ದ ತಾತನ ಪತ್ರ ಬಹಿರಂಗ

Update: 2017-02-18 18:26 IST

ಹೈದರಾಬಾದ್,ಫೆ.18: ಆತ್ಮಹತ್ಯೆ ಮಾಡಿಕೊಂಡಿದ್ದ ಹೈದರಾಬಾದ್ ವಿವಿಯ ಸಂಶೋಧನಾ ವಿದ್ಯಾರ್ಥಿ ರೋಹಿತ ವೇಮುಲ ದಲಿತನಾಗಿರಲಿಲ್ಲ ಎಂಬ ನಿರ್ಧಾರಕ್ಕೆ ಬರುವ ಮೂಲಕ ಗುಂಟೂರು ಜಿಲ್ಲಾಡಳಿತವು ವಿವಾದವೊಂದನ್ನು ಸೃಷ್ಟಿಸಿ ಹೆಚ್ಚು ದಿನಗಳನ್ನು ಕಳೆದಿಲ್ಲ. ಇದೀಗ ರೋಹಿತ ದಲಿತನಾಗಿದ್ದ ಎಂದು ಸ್ಪಷ್ಟಪಡಿಸಿ ಆತನ ಅಜ್ಜ ಕಳೆದ ವರ್ಷದ ಜೂನ್‌ನಲ್ಲಿ ಗುಂಟೂರು ಜಿಲ್ಲಾಧಿಕಾರಿ ಕಾಂತಿಲಾಲ್ ದಾಂಡೆ ಅವರಿಗೆ ಬರೆದಿದ್ದ ಪತ್ರವು ಬಹಿರಂಗಗೊಂಡಿದೆ.

  ‘‘ರೋಹಿತನ ತಾಯಿ ರಾಧಿಕಾ ವೇಮುಲ ನನ್ನ ಮಗ ಮಣಿ ಕುಮಾರನಿಂದ ವಿಚ್ಛೇದನ ಪಡೆದ ಬಳಿಕ ನಾನು ಅಪರೂಪಕ್ಕೆ ಆಕೆಯನ್ನು ಭೇಟಿಯಾಗುತ್ತಿದ್ದೆ. ಅವಳೊಮ್ಮೆ ಪಾರ್ಶ್ವವಾಯುವಿಗೆ ತುತ್ತಾಗಿದ್ದು ಗೊತ್ತಾದ ಬಳಿಕ ಆಕೆಯನ್ನು ನೋಡಲು ಹೋಗಿದ್ದೆ. ಆ ವೇಳೆ ರಾಧಿಕಾ ನಮ್ಮ ವಡ್ಡೇರ ಸಮುದಾಯಕ್ಕೆ ಸೇರಿದವಳಲ್ಲ,ಮಾಲ ಪರಿಶಿಷ್ಟ ಜಾತಿಗೆ ಸೇರಿದವಳು ಎನ್ನುವುದು ನನಗೆ ತಿಳಿದು ಬಂದಿತ್ತು. ರಾಧಿಕಾ ನನ್ನ ಕುಟುಂಬದ ಅಥವಾ ನನ್ನ ಮಗ(ಮಾಜಿ ಪತಿ)ನ ಯಾವುದೇ ನೆರವಿಲ್ಲದೆ ತನ್ನ ಮಕ್ಕಳನ್ನು ಬೆಳೆಸಿದ್ದಾಳೆ. ಹೀಗಾಗಿ ಮಕ್ಕಳೂ ಆಕೆಯ ಜಾತಿಗೆ ಸೇರಿದವರಾಗಿದ್ದಾರೆ ಎಂದು ನಾನು ದೃಢಪಡಿಸುತ್ತೇನೆ. ಅವರ ಮೇಲೆ ನಮ್ಮ ಜಾತಿಯನ್ನು ಹೇರುವಂತಿಲ್ಲ ’’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ರೋಹಿತನ ಎಸ್‌ಸಿ ಪ್ರಮಾಣಪತ್ರವನ್ನು ರದ್ದುಗೊಳಿಸಲು ಕಳೆದ ವಾರ ನಿರ್ಧರಿಸಿರುವ ರಾಜ್ಯ ಸರಕಾರವು ಈ ಸಂಬಂಧ ವೇಮುಲ ಕುಟುಂಬಕ್ಕೆ ನೋಟಿಸನ್ನು ಜಾರಿಗೊಳಿಸಿದೆ.

ಒಂದು ವರ್ಷಕ್ಕೂ ಅಧಿಕ ಸಮಯ ‘ತನಿಖೆ ’ಯನ್ನು ಕೈಗೊಂಡಿದ್ದ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿಯು ರೋಹಿತ ಮತ್ತು ಆತನ ತಾಯಿ ರಾಧಿಕಾ ಮೋಸದಿಂದ ಎಸ್‌ಸಿ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದರು ಎಂದು ಆರೋಪಿಸಿತ್ತು.

ಸೋದರ ರಾಜಾ ವೇಮುಲನ ಜಾತಿ ಪ್ರಮಾಣಪತ್ರದಲ್ಲಿ ವಡ್ಡೇರಾ ಎಂದಿರುವುದು ಬೆಳಕಿಗೆ ಬಂದ ನಂತರ ರೋಹಿತನ ಜಾತಿಯ ಕುರಿತು ವಿವಾದ ಸೃಷ್ಟಿಯಾಗಿತ್ತು. ತಂದೆ ಮಣಿ ಕುಮಾರ ವಡ್ಡೇರ ಜಾತಿಗೆ ಮತ್ತು ತಾಯಿ ರಾಧಿಕಾ ಮಾಲ ಜಾತಿಗೆ ಸೇರಿದವರು ಎನ್ನುವುದು ಬಳಿಕ ಹೊರಬಿದ್ದಿತ್ತು.

 ಆದರೆ ಮಣಿಕುಮಾರ ಮದ್ಯವ್ಯಸನಿಯಾಗಿದ್ದ ಮತ್ತು ರಾಧಿಕಾ ದಲಿತಳು ಎಂದು ಗೊತ್ತಾದ ಬಳಿಕ ಆಕೆಯನ್ನು ತ್ಯಜಿಸಿದ್ದ ಎಂದು ಕುಟುಂಬವು ಹೇಳಿದೆ. ಆದ್ದರಿಂದ ತಂದೆಯ ಬಗ್ಗೆ ಗೊತ್ತೇ ಇಲ್ಲದ ರೋಹಿತ ತನ್ನ ತಾಯಿಯ ಜಾತಿಯವನಾಗಿಯೇ ಬೆಳೆದಿದ್ದ.

ರೋಹಿತ ದಲಿತನಲ್ಲ ಎಂದು ಸರಕಾರವು ಹೇಳಿರುವುದರಿಂದ ಆತ ದಲಿತನಾಗಿದ್ದ ಎನ್ನುವುದನ್ನು ಆತನ ಕುಟುಂಬವು ಸಾಬೀತುಗೊಳಿಸದಿದ್ದರೆ ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಮತ್ತು ಹೈದರಾಬಾದ್ ವಿವಿಯ ಕುಲಪತಿ ಅಪ್ಪಾರಾವ್ ಪೊಡಿಲೆ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಹೈದರಾಬಾದ್ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣ ಠುಸ್ ಆಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News