ನೋಟು ರದ್ದತಿ ವಿಫಲ ಪ್ರಯೋಗ : ಉದ್ಧವ್ ಠಾಕ್ರೆ

Update: 2017-02-18 13:03 GMT

ಥಾಣೆ, ಫೆ.18: ನೋಟು ರದ್ದತಿ ನಿರ್ಧಾರದ ಬಗ್ಗೆ ಬಿಜೆಪಿ ಸರಕಾರವನ್ನು ಟೀಕಿಸಿರುವ ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ, ಇದರಿಂದ ಕಾಳಧನವನ್ನೂ ಬಯಲಿಗೆಳೆಯಲಾಗಿಲ್ಲ ಮತ್ತು ಭ್ರಷ್ಟಾಚಾರ ನಿಯಂತ್ರಿಸಲೂ ಸಾಧ್ಯವಾಗಿಲ್ಲ. ಇದೊಂದು ವಿಫಲ ಪ್ರಯೋಗ ಎಂದಿದ್ದಾರೆ.

 ಕೇಂದ್ರ ಸರಕಾರದ ಈ ಕ್ರಮದಿಂದ ಶ್ರೀಮಂತ ವ್ಯಕ್ತಿಗಳ ಮೇಲೆ ಯಾವುದೇ ಪರಿಣಾಮ ಆಗಲಿಲ್ಲ. ಜನಸಾಮಾನ್ಯರು ಮಾತ್ರ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ ಎಂದು ಫೆ.21ರಂದು ನಡೆಯಲಿರುವ ಥಾಣೆ ನಗರಪಾಲಿಕೆ ಚುನಾವಣೆಯ ಹಿನ್ನೆಲೆಯಲ್ಲಿ ನಡೆದ ಶಿವಸೇನೆಯ ಪ್ರಚಾರ ಸಭೆಯಲ್ಲಿ ಠಾಕ್ರೆ ಹೇಳಿದರು.

 ನೋಟು ರದ್ದತಿಯಿಂದ ನಿಮಗೇನಾದರೂ ಬಾಧೆಯಾಗಿದೆಯೇ ಎಂದು ನನ್ನಲ್ಲಿ ಕೇಳಿದರೆ ಹೌದೆಂದು ಉತ್ತರಿಸುತ್ತೇನೆ. ಯಾಕೆಂದರೆ ಜನಸಾಮಾನ್ಯರು ದಿನಗಟ್ಟಲೆ ಸರದಿ ಸಾಲಿನಲ್ಲಿ ನಿಂತಿರುವುದನ್ನು ಕಂಡು ನನಗೆ ಬಾಧೆಯಾಗಿದೆ. ಯೋಧರೂ ಸೇರಿದಂತೆ ಜನತೆ ತಮ್ಮ ಹಣವನ್ನೂ ಮರಳಿ ಪಡೆಯಲು ಆಗುತ್ತಿಲ್ಲ ಎಂಬ ವಿಷಯ ಕೇಳಿದಾಗ ನನಗೆ ಬಾಧೆಯಾಗಿದೆ ಎಂದ ಉದ್ಧವ್ , ಈ ದೇಶವನ್ನು ನಿರ್ಮಿಸಿದ್ದೇ ತಾನು. ತಾನು ರಾಷ್ಟ್ರಪಿತ ಎಂಬ ರೀತಿಯಲ್ಲಿ ಮೋದಿಯವರ ವರ್ತನೆಯಿದೆ ಎಂದು ಟೀಕಿಸಿದರು.

  ಇದೇ ರೀತಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ಒಳ್ಳೆಯ ಕಾರ್ಯಗಳ ಶ್ರೇಯವನ್ನು ತಾನು ಪಡೆಯುತ್ತಿದ್ದಾರೆ. ತಾನೇ ಈ ರಾಜ್ಯದ ನಿರ್ಮಾತೃ ಎಂಬ ರೀತಿ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು. ಶಿವಸೇನೆ ಮತ್ತು ಠಾಣೆ ನಗರದ ಮಧ್ಯೆ ಒಂದು ವಿಶೇಷ ಬಂಧವಿದೆ . ಈ ಬಾರಿಯೂ ನಗರದ ಜನತೆ ಶಿವಸೇನೆಯನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

  ನಗರಪಾಲಿಕೆ ಚುನಾವಣೆಗೆ ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡ ಕುರಿತು ಪ್ರಸ್ತಾವಿಸಿದ ಠಾಕ್ರೆ, ಅವರು ಹೆಚ್ಚಿನದನ್ನು ಅಪೇಕ್ಷಿಸಿದರು. ಪ್ರಸ್ತುತ ಶಿವಸೇನೆಯ ಅಭ್ಯರ್ಥಿಗಳು ಆಯ್ಕೆಯಾಗಿರುವ 40 ಸ್ಥಾನಗಳೂ ಸೇರಿ 114 ಸ್ಥಾನಗಳಿಗೆ ಅವರು ಬೇಡಿಕೆ ಇಟ್ಟಿದ್ದರು ಎಂದು ಹೇಳಿದರು. ಮುಂಬೈ ನಗರವನ್ನು ಪಾಟ್ನಾ ನಗರದೊಂದಿಗೆ ಹೋಲಿಸಿರುವ ಮುಖ್ಯಮಂತ್ರಿ ಫಡ್ನವೀಸ್‌ರನ್ನು ಟೀಕಿಸಿದ ಅವರು, ಮುಂಬೈ ಅಷ್ಟೊಂದು ಕೆಟ್ಟದಾಗಿದೆಯೇ. ಅವರು ಮುಂಬೈಯನ್ನು ಲಂಡನ್ ಇತ್ಯಾದಿ ವಿದೇಶಿ ನಗರಗಳ ಜೊತೆಗೆ ಹೋಲಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News