ಮಂಗಳೂರು: ತುಳು ಅಕಾಡಮಿ ಗೌರವ ಪ್ರಶಸ್ತಿ ಪ್ರದಾನ
ಮಂಗಳೂರು, ಫೆ.18: ತುಳು ಭಾಷೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಮತ್ತು ತುಳು ಭಾಷಾ ಪರಂಪರೆ ಉಳಿಸಲು ಸಂವಿಧಾನದ 8ನೆ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನ ನಡೆಯುತ್ತಲಿದೆ. ಇದಕ್ಕಾಗಿ ತುಳುವರೆಲ್ಲಾ ಗಟ್ಟಿ ಧ್ವನಿ ಮೊಳಗಿಸಬೇಕು ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ವತಿಯಿಂದ ಶನಿವಾರ ಅಕಾಡಮಿಯ ಸಿರಿ ಚಾವಡಿಯಲ್ಲಿ ನಡೆದ ಗೌರವ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಹುಮಾನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ತುಳುವರಿಗೆ ಕಂಬಳವೂ ಬೇಕು. ಕೋಳಿ ಅಂಕವೂ ಬೇಕು. ಈ ಸಾಂಪ್ರದಾಯಿಕ ಕ್ರೀಡೆಗಳಿಗೆ ಎಂದೂ ದಕ್ಕೆಯಾಗಬಾರದು. ತುಳು ಭಾಷಾ ಪರಂಪರೆ ಉಳಿಯುವಲ್ಲಿ ಅನೇಕರು ಶ್ರಮಿಸಿದ್ದಾರೆ. ಇವರೆಲ್ಲರ ನೇತೃತ್ವದಲ್ಲಿ ತುಳು ಭಾಷೆಗೆ ಶಾಸೀಯ ಸ್ಥಾನಮಾನ ದೊರಕಿಸುವ ನಿಟ್ಟಿನಲ್ಲಿ ಹೋರಾಟಗಳು ನಡೆಯಬೇಕಾಗಿದೆ ಎಂದು ಆಸ್ಕರ್ ಫೆರ್ನಾಂಡಿಸ್ ಹೇಳಿದರು.
ತುಳು ಸಾಹಿತ್ಯ ಕ್ಷೇತ್ರದ ಸಾಧಕ ಮುದ್ದು ಮೂಡುಬೆಳ್ಳೆ, ತುಳು ನಾಟಕ ಕ್ಷೇತ್ರದ ಸಾಧಕ ಆನಂದ ಶೆಟ್ಟಿ, ತುಳು ಸಿನಿಮಾ ಕ್ಷೇತ್ರದ ಸಾಧಕ ತಮ್ಮ ಲಕ್ಷ್ಮಣ ಅವರಿಗೆ 2016ನೆ ಸಾಲಿನ ಗೌರವ ಪ್ರಶಸ್ತಿಯನ್ನು ಪ್ರದಾನಿಸಲಾಯಿತು. ಯೋಗೀಶ್ ರಾವ್ ಚಿಗುರುಪಾದೆ ಮತ್ತು ಶಶಿರಾಜ್ ಕಾವೂರು ಅವರಿಗೆ 2016ನೆ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ನೀಡಲಾಯಿತು.
ಶಾಸಕ ಜೆ.ಆರ್.ಲೋಬೊ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗೂರ್, ಬ್ಲೋಸಂ ಫೆರ್ನಾಂಡಿಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಿ.ಎಂ.ರವಿಕುಮಾರ್, ಅಕಾಡಮಿ ಸದಸ್ಯರಾದ ಪ್ರೊ.ಡಿ.ವೇದಾವತಿ, ಡಿ.ಎಂ.ಕುಲಾಲ್, ಮೋಹನ್ ಕೊಪ್ಪಲ, ರಘು ಇಡ್ಕಿದು, ರೂಪಕಲಾ ಆಳ್ವ, ಕೆ.ಟಿ.ವಿಶ್ವಾನಾಥ್ ಮತ್ತಿತರರು ಉಪಸ್ಥಿತರಿದ್ದರು.
ಅಕಾಡಮಿ ಅಧ್ಯಕ್ಷೆ ಎಂ.ಜಾನಕಿ ಬ್ರಹ್ಮಾವರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ ಸ್ವಾಗತಿಸಿದರು. ಸದಸ್ಯ ದುರ್ಗಾಪ್ರಸಾದ್ ರೈ ಕುಂಬ್ರ ಕಾರ್ಯಕ್ರಮ ನಿರೂಪಿಸಿದರು.