ಪಕ್ಷದಿಂದ ಹೊರಹಾಕುವುದಾದರೆ ಹಾಕಲಿ: ಜನಾರ್ದನ ಪೂಜಾರಿ
ಮಂಗಳೂರು, ಫೆ.18: ಪಕ್ಷದಿಂದ ನನ್ನನ್ನು ಹೊರಹಾಕುವುದಾದರೆ ಈವತ್ತೇ ಹಾಕಲಿ. ನಾನು ಅದನ್ನು ಖುಷಿಯಿಂದ ಸ್ವೀಕರಿಸುವೆ. ಪಾರ್ಲಿಮೆಂಟ್‌ನಲ್ಲಿ 'ಸತ್ಯಮೇವ ಜಯತೇ' ಎಂದು ಬರೆಯಲಾಗಿದೆ. ಹಾಗಾಗಿ ಯಾವತ್ತೂ ಸತ್ಯವೇ ಗೆಲ್ಲುವುದು ಎಂದು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಹೇಳಿದರು.
ಶನಿವಾರ ಕುದ್ರೋಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದ ಗಾಂಧಿ ಕುಟುಂಬದ ಮೇಲೆ ನನಗೆ ನಂಬಿಕೆಯಿದೆ. ನನ್ನನ್ನು ಪಕ್ಷದಿಂದ ಹೊರ ಹಾಕುವುದು ಅಷ್ಟು ಸುಲಭವಿಲ್ಲ. ನಾನೇನು ತಪ್ಪು ಮಾಡಿದೆ? ಸಿದ್ಧರಾಮಯ್ಯರಿಗೆ ಸಲಹೆ ಕೊಟ್ಟದ್ದು ತಪ್ಪಾ? ಸಿದ್ಧರಾಮಯ್ಯ ಜೆಡಿಎಸ್‌ನಲ್ಲಿದ್ದು ಹಣಕಾಸು ಸಚಿವರಾಗಿದ್ದಾಗ ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದೆ. ಆವಾಗ 1 ರೂ.ಗೆ ಅಕ್ಕಿ ನೀಡುವಂತೆ ಸಲಹೆ ನೀಡಿದ್ದೆ. ಆಗ ದರ್ಪದಿಂದ ಮಾತಾಡಿದರು. ನನ್ನ ಹೇಳಿಕೆ ಸುಳ್ಳಾಗಿದ್ದರೆ ಧರ್ಮಸ್ಥಳಕ್ಕೆ ಅಥವಾ ಕುದ್ರೋಳಿಗೆ ಬಂದು ಆಣೆ ಮಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸವಾಲೆಸೆದರು.
ಗೊಂದಲ ವಿಚಾರವನ್ನು ಪಕ್ಷದ ವೇದಿಕೆಯಲ್ಲೇ ಚರ್ಚಿಸಬಹುದಲ್ಲವೇ? ಎಂಬ ನಾಯಕರ ಹೇಳಿಕೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ನಾನು ಮೈಸೂರಿನಲ್ಲಿ ಪಕ್ಷದ ಕಾರ್ಯಕ್ರಮದಲ್ಲೇ ಸಲಹೆ ನೀಡಿದ್ದೆ. ಆದರೆ ಅದನ್ನು ಸ್ವೀಕರಿಸಲಿಲ್ಲ ಎಂದ ಪೂಜಾರಿ, ಪಕ್ಷನಿಷ್ಠೆಗೆ ನಾನು ಬದ್ಧ. ಒಂದು ವೇಳೆ ಪಕ್ಷ ನನ್ನನ್ನು ಹೊರಹಾಕಿದರೂ ನಾನು ತಿರುಗಿ ಬೀಳುವುದಿಲ್ಲ. ಪಕ್ಷದಲ್ಲೇ ಇರುತ್ತೇನೆ, ಎಸ್.ಎಂ. ಕೃಷ್ಣ, ಜಾಫರ್ ಶರೀಫ್ ರಂತಹ ಹಿರಿಯ ನಾಯಕರು ಪಕ್ಷದಿಂದ ದೂರವಾಗಿದ್ದು, ಇದೀಗ ಕುಮಾರ್ ಬಂಗಾರಪ್ಪ ಆ ಸಾಲಿನಲ್ಲಿದ್ದಾರೆ. ಇದು ಪಕ್ಷದೊಳಗಿನ ಅವ್ಯವಸ್ಥೆಯನ್ನು ತೋರಿಸುತ್ತದೆ. ಇದೇ ರೀತಿ ಮುಂದುವರಿದರೆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಮುಂದಿನ ದಿನಗಳು ಕಠಿಣವಾಗಲಿದೆ. ಸಿದ್ಧರಾಮಯ್ಯ ಇಂದಿರಾಗಾಂಧಿಯ ಬಗ್ಗೆ ಕೀಳಾಗಿ ಮಾತನಾಡಿದವರು. ಕುದ್ರೋಳಿ ಕ್ಷೇತ್ರಕ್ಕೆ ಬಾರದೆ ದಸರಾ ಸಂದರ್ಭ ದೇವರನ್ನೇ ಕಾಯಿಸಿದ ಅವರಿಗೆ ತಕ್ಕ ಶಾಸ್ತಿ ಸಿಕ್ಕೇ ಸಿಗುತ್ತದೆ ಎಂದರು.
ಶಾಸಕ ಲೋಬೊರಿಗೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುವ ಬಗ್ಗೆ ಅನುಮಾನವಿದೆ ಎಂದು ಪತ್ರಕರ್ತರ ಮಾತಿಗ ಪ್ರತಿಕ್ರಿಯಿಸಿದ ಪೂಜಾರಿ, ಟಿಕೆಟ್ ಗೆಲ್ಲುವವರಿಗಲ್ಲದೆ ಸೋಲುವವರಿಗೆ ಕೊಡುತ್ತಾರೆಯೇ? ಐವನ್‌ಗೆ ನೀಡಿದರೆ ಕಾಂಗ್ರೆಸ್ ಸೋಲಲಿದೆ ಎಂಬ ಭವಿಷ್ಯ ನುಡಿದರು.
ಇತ್ತೀಚೆಗೆ ನಿಧನರಾದ ಬಿಲ್ಲವ ಮುಖಂಡ, ಬೆಂಗಳೂರು ಬಿಲ್ಲವ ಸಂಘದ ಅಧ್ಯಕ್ಷ ನಾರಾಯಣ ಸ್ವಾಮಿ ಹೆಸರನ್ನು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿರುವ ಪುಷ್ಕರಿಣಿಗೆ ನಾಮಕರಣ ಮಾಡಲಾಗುವುದು ಎಂದು ಪೂಜಾರಿ ಹೇಳಿದರು.
ಪುಷ್ಕರಿಣಿ ವ್ಯಕ್ತಿಯ ಹೆಸರಿಡುವುದು ಎಷ್ಟು ಸೂಕ್ತ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪೂಜಾರಿ, ನಾನು ದೇಶದ ನಾನಾ ಕಡೆ ಸುತ್ತಿದ್ದೇನೆ. ತಮಿಳುನಾಡು ಸೇರಿದಂತೆ ದೇಶದ ಹಲವು ಕಡೆ ದೇವಳದ ಕೆರೆಗಳಿಗೆ ವ್ಯಕ್ತಿಗಳ ಹೆಸರು ಇಡಲಾಗಿದೆ. ಈ ನಿಟ್ಟಿನಲ್ಲಿ ಕುದ್ರೋಳಿ ಕ್ಷೇತ್ರ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸಿದ ನಾರಾಯಣಸ್ವಾಮಿಯ ಹೆಸರನ್ನು ಫೆ.19ರಂದು ಸಂಜೆ 5 ಗಂಟೆಗೆ ಪುಷ್ಕರಿಣಿ, ಹೂದೋಟಕ್ಕೆ ನಾಮಕರಣ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕುದ್ರೋಳಿ ದೇವಳದ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಟ್ರಸ್ಟಿ ಮಹೇಶ್ಚಂದ್ರ, ರವಿಶಂಕರ್ ಮಿಜಾರು, ಉದ್ಯಮಿ ಗಂಗಾಧರ ಅಮೀನ್ ನಾಸಿಕ್, ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.
ಇತ್ತೀಚೆಗೆ ನಿಧನರಾದ ಪತ್ರಕರ್ತ ಚೇತನ್‌ರಾಂ ಇರಂತಕಜೆಯ ಕುಟುಂಬ ಸದಸ್ಯೆಯ ಹೆಸರಿಗೆ 50 ಸಾವಿರ ರೂ.ಚೆಕ್ ಬರೆದು ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ಪೂಜಾರಿ, ಆತುರ ಮತ್ತು ಭಾವೋದ್ವೇಗಕ್ಕೆ ಒಳಗಾಗಿ ನಾನು ಪತ್ರಕರ್ತನ ಕುಟುಂಬಕ್ಕೆ ಪ್ರತಿ ತಿಂಗಳು 50 ಸಾವಿರ ರೂ.ಸಹಾಯ ನೀಡುವುದಾಗಿ ಘೋಷಿಸಿದ್ದೆ. ಆದರೆ ಅಷ್ಟೊಂದು ಮೊತ್ತ ಕೊಡಲು ನನಗೆ ಸಾಧ್ಯವಿಲ್ಲ. ಈಗ ಪ್ರತಿ ತಿಂಗಳು ಬರುತ್ತಿರುವ 50 ಸಾವಿರ ರೂ. ಪಿಂಚಣಿಯಲ್ಲಿ 30,000 ರೂ. ನೇರವಾಗಿ ಆಶ್ರಮಗಳಿಗೆ ಸಂದಾಯವಾಗುತ್ತಿದೆ. ಇದನ್ನೆಲ್ಲ ಯೋಚನೆ ಮಾಡದೆ, ರಾಜಕೀಯ ಜೀವನದಲ್ಲಿ ಮೊದಲ ಬಾರಿ ತಪ್ಪಿ ಮಾತನಾಡಿದ್ದೇನೆ. ಅವರ ಕುಟುಂಬ, ಸಾರ್ವಜನಿಕರಲ್ಲಿ ಈ ಬಗ್ಗೆ ಕ್ಷಮೆಯಾಚಿಸುತ್ತೇನೆ. ಆದುದರಿಂದ ಏಕಗಂಟಿನಲ್ಲಿ 50 ಸಾವಿರ ರೂ. ಚೆಕ್ ನೀಡುತ್ತಿದ್ದೇನೆ ಎಂದರು.