ಕಥೆ ಆಧಾರಿತ ಚಿತ್ರಗಳಲ್ಲಿ ಗುರುತಿಸಿಕೊಳ್ಳುವೆ: ನಟ ದಿಗಂತ್
ಬೆಳ್ತಂಗಡಿ, ಫೆ.18: ಸದಭಿರುಚಿಯ ಕಥೆ ಆಧರಿಸಿ ರೂಪುಗೊಳ್ಳುವ ಚಲನಚಿತ್ರಗಳೊಂದಿಗೆ ಗುರುತಿಸಿಕೊಂಡು ಕನ್ನಡಿಗರನ್ನು ರಂಜಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ಖ್ಯಾತ ಚಿತ್ರನಟ ದಿಗಂತ್ ಅಭಿಪ್ರಾಯಪಟ್ಟರು.
ಅವರು, ಝೇಂಕಾರಶೈಕ್ಷಣಿಕ ಮತ್ತು ಸಾಂಸ್ಕೃತಿಕ ಉತ್ಸವದ ಭಾಗವಾಗಿ ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರವು ಉಜಿರೆಯ ಇಂದ್ರಪ್ರಸ್ಥ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ 'ಆ್ಯನ್ ಇವನಿಂಗ್ ವಿತ್ ದಿಗಂತ್' ಕಾರ್ಯಕ್ರಮ ನಡೆಸಿಕೊಟ್ಟು ತಮ್ಮ ಚಿತ್ರಯಾನಕ್ಕೆ ಸಂಬಂಧಿಸಿದಂತೆ ಮಾತುಗಳನ್ನಾಡಿದರು.
ನನ್ನ ನಿಜವಾದ ಹೀರೋಗಳು ನೀವು. ನಿಮ್ಮ ಬೆಂಬಲದಿಂದಲೇ ನಾನು ಚಲನಚಿತ್ರರಂಗದಲ್ಲಿ ನೆಲೆಯೂರಲು ಕಾರಣವಾಯಿತು. ನಿಮ್ಮ ಮೆಚ್ಚುಗೆಯ ಬೆಂಬಲವು ಚಿತ್ರರಂಗದಲ್ಲಿ ಕಾರ್ಯನಿರ್ವಹಿಸುವ ಹುಮ್ಮಸ್ಸನ್ನು ಕಾಯ್ದಿರಿಸಿದೆ. ಸದಭಿರುಚಿಯ ಚಲನಚಿತ್ರಗಳಲ್ಲಿ ಅಭಿನಯಿಸುವ ತಮ್ಮ ಆಕಾಂಕ್ಷೆಯನ್ನು ವ್ಯಕ್ತಪಡಿಸಿದರು.
ಕಲೆ ಎಲ್ಲರನ್ನು ಕೈ ಬೀಸಿ ಕರೆಯುತ್ತದೆ. ಆದರೆ ಅದೃಷ್ಟ ಇದ್ದವರನ್ನು ಕೈ ಹಿಡಿಯುತ್ತದೆ. ಯಾವುದೇ ಕ್ಷೇತ್ರವಾಗಲಿ ಕಠಿಣವಾದ ಶ್ರಮ, ತಾಳ್ಮೆ, ನಿರಂತರ ಅಧ್ಯಯನ ಬೇಕು. ಮುಂಗಾರು ಮಳೆಯ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದಾಗ ಜನರು ನನ್ನನ್ನು ಗುರುತಿಸಿ, ಎಲ್ಲರ ಅಭಿಮಾನ, ಪ್ರೋತ್ಸಾಹದಿಂದ ಇಂದು ಈ ಮಟ್ಟಕ್ಕೆ ಏರಿಸಿದೆ ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ.ವೀರೇಂದ್ರ ಹೆಗ್ಗಡೆ ಅವರು, ಶೈಕ್ಷಣಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತಮ್ಮ ವಿಭಿನ್ನ ಪ್ರತಿಭೆಯನ್ನು ಅನಾವರಣಗೊಳಿಸಬೇಕು. ಭಗವಂತ ಅವಕಾಶ ಕೊಡುತ್ತಾನೆ. ಅದನ್ನು ನಾವು ಬಾಚಿಕೊಳ್ಳಬೇಕು. ನಮ್ಮ ಶಿಕ್ಷಣದೊಂದಿಗೆ ಇನ್ನಿತರ ಚಟುವಟಿಕೆಗಳಲ್ಲಿ ಭಾಗವಹಿಸಿ, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು. ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಪಠ್ಯದ ಬಗ್ಗೆಯೂ ಗಮನ ಇರಲಿ. ಏಕಾಗ್ರತೆಯಿಂದ ಅಧ್ಯಯನಶೀಲತೆಯನ್ನು ಬೆಳೆಸಿಕೊಳ್ಳಿ ಎಂದರು.
ಧರ್ಮಸ್ಥಳದ ಹೇಮಾವತಿ ಹೆಗ್ಗಡೆ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ ಬಿ.ಯಶೋವರ್ಮ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ತಕ್ಷಣ ನೃತ್ಯದ ಮೂಲಕ ಗಮನಸೆಳೆದ ದಿಗಂತ್ ಸಭಾಂಗಣದಲ್ಲಿದ್ದ ವಿದ್ಯಾರ್ಥಿಗಳ ಹಲವು ಪ್ರಶ್ನೆಗಳಿಗೆ ನಗುನಗುತ್ತಲೇ ಪ್ರತಿಕ್ರಿಯಿಸಿದರು.
ಝೇಂಕಾರ ಉತ್ಸವದ ಆತಿಥೇಯ ಪ್ರತಿನಿಧಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಿದರು. ಇದೇ ಸಂದರ್ಭ ವೇಕಪ್‌ಬಾಂಡ್ ನಿರ್ಮಾಣದಲ್ಲಿ ಆದ ಅಮ್ಮ ಆಲ್ಬಂ ಸಾಂಗ್‌ನ್ನು ಬಿಡುಗಡೆ ಮಾಡಲಾಯಿತು.