ಧರ್ಮದ ಉನ್ನತಿಯಿಂದ ಜೀವನಕ್ಕೆ ಬೆಳಕು : ವಜ್ರದೇಹಿ ಶ್ರೀ
ಸುಳ್ಯ, ಫೆ.18: ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಾಲ್ಕನೇ ದಿನದ ಜನಪದಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.
ಆಶೀರ್ವಚನ ನೀಡಿದ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಯವರು, ಧರ್ಮದ ಆವಿಷ್ಕಾರದ ಉನ್ನತಿಯಿಂದ ನಮ್ಮ ಜೀವನಕ್ಕೆ ಬೆಳಕು ಸಿಗುತ್ತದೆ. ಸೇವೆಗೆ ದೊಡ್ಡ ಹೆಸರು ದೇವ ಸೇನಾನಿ ಸುಬ್ರಹ್ಮಣ್ಯ ಸ್ವಾಮಿ. ಜ್ಯೋತಿಷ್ಯ ಹುಟ್ಟಿಕೊಂಡಿದ್ದೇ ಸುಬ್ರಹ್ಮಣ್ಯ ಸ್ವಾಮಿಯ ಹೆಸರಿನಿಂದ. ಸುಬ್ರಹ್ಮಣ್ಯನಿಗೆ ಆರು ಮುಖ. ಅಡ್ಕ ಕೂಡಿಸು ಆರು ಅಡ್ಕಾರು. ಆದ್ದರಿಂದ ಅಡ್ಕಾರಿನ ಹೆಸರಿನಲ್ಲೇ ಸುಬ್ರಹ್ಮಣ್ಯನ ಹೆಸರಿದೆ ಎಂದು ಅವರು ಹೇಳಿದರು. ಕೆ.ವಿ.ಜಿ. ದಂತ ಮಹಾ ವಿದ್ಯಾಲಯದ ದಂತ ಪರಿರಚನ ವಿಭಾಗ ಮುಖ್ಯಸ್ಥ ಡಾ. ದಯಾಕರ ಧಾರ್ಮಿಕ ಉಪನ್ಯಾಸ ನೀಡಿದರು.
ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೈ, ತಾ.ಪಂ. ಸದಸ್ಯ ತೀರ್ಥರಾಮ ಜಾಲ್ಸೂರು, ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಯೋಜನಾಧಿಕಾರಿ ಯುವರಾಜ್ ಜೈನ್, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ಸಿಂಡಿಕೇಟ್ ಸದಸ್ಯ ಡಾ. ರಘು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವದ ಅಂಗವಾಗಿ ಸಾಂಸೃತಿಕ ಪ್ರದರ್ಶನ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಲಯನ್ ಕಿಶೋರ್ ಡಿ ಶೆಟ್ಟಿ ನಿರ್ದೇಶನದ ಲಕುಮಿ ತಂಡದ ಕುಸಲ್ದ ಕಲಾವಿದರಿಂದ ಹಾಸ್ಯಮಯ ತುಳುನಾಟಕ 'ದುಂಬೊರಿ ಪಂತೆಗೆ' ಪ್ರದರ್ಶನಗೊಂಡಿತು.