ಉಳ್ಳಾಲ: ನೀರಿನ ಮಿತಬಳಕೆಗೆ ನಗರಸಭೆ ಸೂಚನೆ
ಮಂಗಳೂರು, ಫೆ.18: ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಮುನ್ನೆಚ್ಚರಿಕೆಗಾಗಿ ಸಾರ್ವಜನಿಕರು ಮನೆಯ ಅಂಗಳ, ಅಂಗಡಿ ಮಳಿಗೆಗಳನ್ನು ತೊಳೆಯಲು, ಕೈ ತೋಟ ಅಥವಾ ಕೃಷಿಗೆ ಹಾಗೂ ವಾಹನಗಳನ್ನು ತೊಳೆಯಲು ನೀರನ್ನು ಪೋಲು ಮಾಡಬಾರದು. ಕುಡಿಯಲು ಸರಬರಾಜಾಗುವ ನೀರಿನ ಮಿತ ಬಳಕೆ ಮಾಡಿ, ದಿನ ಬಳಕೆಗಾಗಿ ನೀರನ್ನು ಸಂಗ್ರಹಿಸಿ ಇಡಬೇಕು. ಅನಧಿಕೃತ ನಳ್ಳಿ ನೀರಿನ ಸಂಪರ್ಕ ಜೋಡಣೆಯನ್ನು ಸಕ್ರಮಗೊಳಿಸಬೇಕು. ನೀರಿನ ಬಿಲ್ ನಗರಸಭೆಗೆ ಪಾವತಿಸಲು ಬಾಕಿ ಇದ್ದಲ್ಲಿ ಪಾವತಿಸಬೇಕು ಎಂದು ನಗರಸಭೆ ಪ್ರಕಟನೆ ತಿಳಿಸಿದೆ.
ನೀರಿನ ಬಿಲ್ಲನ್ನು ಪಾವತಿಸದೆ ಅಥವಾ ನಳ್ಳಿ ನೀರಿನ ಸಂಪರ್ಕ ಜೋಡಣೆಯನ್ನು ಸಕ್ರಮಗೊಳಿಸದೆ ಇದ್ದಲ್ಲಿ ನಗರಸಭೆಯಿಂದ ಜೋಡಣೆಯನ್ನು ಸ್ಥಗಿತಗೊಳಿಸಲಾಗುವುದು. ಈಗಾಗಲೇ ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಾವವಿರುವುದರಿಂದ 2 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುವುದು. ಕುಡಿಯುವ ನೀರಿನ ಸದ್ಭಳಕೆ ಮಾಡಲು ನಗರಸಭೆಯೊಂದಿಗೆ ಸಹಕರಿಸಲು ಪ್ರಕಟನೆ ತಿಳಿಸಿದೆ.