ಬಂಟ್ವಾಳ: 61.36 ಲಕ್ಷ ರೂ. ಮಿಗತೆ ಬಜೆಟ್ ಮಂಡನೆ; ಆಯವ್ಯಯ, ಜಮಾ ಖರ್ಚಿನ ಲೆಕ್ಕಪತ್ರದಲ್ಲಿ ಅಂಕಿ ಅಂಶಗಳ ವ್ಯತ್ಯಾಸ

Update: 2017-02-18 14:54 GMT

ಬಂಟ್ವಾಳ, ಫೆ. 18: ಒಟ್ಟು 61.36 ಲಕ್ಷ ರೂ. ಮಿಗತೆ ಬಜೆಟನ್ನು ಬಂಟ್ವಾಳ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಶನಿವಾರ ಮಂಡಿಸಿದರು.

ಆರಂಭಿಕ ಶಿಲ್ಕು 4.6 ಕೋಟಿ ರೂ. 2017-18ರ ಜಮೆ 20.85 ಕೋಟಿ ರೂ. ಖರ್ಚು 24.85 ಕೋಟಿ ರೂ. ಉಳ್ಳ ಬಜೆಟ್‌ನಲ್ಲಿ ಕಟ್ಟಡ ತೆರಿಗೆಯಿಂದ 1.43 ಕೋಟಿ ರೂ., ಕಟ್ಟಡ ಬಾಡಿಗೆಯಿಂದ 25 ಲಕ್ಷ ರೂ., ಕಟ್ಟಡ ಪರವಾನಗಿಯಿಂದ 3 ಲಕ್ಷ ರೂ., ಉದ್ಯಮ ಪರವಾನಗಿಯಿಂದ 11 ಲಕ್ಷ ರೂ., ಬಸ್ ನಿಲ್ದಾಣ ಫೀಸ್ ನಿಂದ 7 ಲಕ್ಷ ರೂ., ನೀರಿನ ಶುಲ್ಕದಿಂದ 58 ಲಕ್ಷ ರೂ., ಎಸ್‌ಎಫ್‌ಸಿ ಮುಕ್ತನಿಯಿಂದ 1.89 ಕೋಟಿ ರೂ., ಸಿಎಂ ವಿಶೇಷ ಅನುದಾನಕ್ಕೆ 3 ಕೋಟಿ ನಿರೀಕ್ಷಿಸಲಾಗಿದೆ.

2016-17ನೆ ಸಾಲಿನ ಖರ್ಚಿಗೆ ಸಂಬಂಧಿಸಿ ಎಸ್‌ಎಫ್‌ಸಿ ಮುಕ್ತನಿಯಿಂದ 61.55 ಲಕ್ಷ ರೂ. ರಸ್ತೆ, 10 ಲಕ್ಷ ರೂ. ನೀರಿನ ಕಾಮಗಾರಿ, 45 ಲಕ್ಷ ರೂ.ಗಳನ್ನು ಘನತ್ಯಾಜ್ಯಕ್ಕೆ ಕಾದಿರಿಸಲಾಗಿದೆ ಎಂದು ಅಧ್ಯಕ್ಷರು ಬಜೆಟ್‌ನಲ್ಲಿ ಪ್ರಕಟಿಸಿದರು.

ವಿದ್ಯುತ್ ಕಂಬ ಹಾಗೂ ದೀಪ ನಿರ್ವಹಣೆ ಹೊತ್ತವರು ಅಸಮರ್ಪಕ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ಸದಸ್ಯರು ಆಕ್ಷೇಪ ಸಲ್ಲಿಸಿದರು.

2016 ಎಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಕೆಲವೊಂದು ಆದಾಯದ ಬಗ್ಗೆ ಬಜೆಟ್ ಪುಸ್ತಕದಲ್ಲಿ ದಾಖಲಿಸಿದ ಮೊತ್ತ ಹಾಗೂ ಪ್ರತಿ ತಿಂಗಳೂ ಸಾಮಾನ್ಯ ಸಭೆಯಲ್ಲಿ ನೀಡಿದ ಮೊತ್ತಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ನೀರಿನ ಶುಲ್ಕದಲ್ಲಿ 30 ಸಾವಿರ ರೂ. ವ್ಯತ್ಯಾಸವಿದ್ದರೆ, ಕಟ್ಟಡ ಪರವಾನಗಿ ಶುಲ್ಕ ವಿಚಾರದಲ್ಲಿ 5 ಲಕ್ಷ ರೂ. ಮೊತ್ತ ವ್ಯತ್ಯಾಸ ಕಾಣುತ್ತಿದೆ. ಹೀಗೆ ಹಲವು ಅಂಶಗಳಿದ್ದು ಇದಕ್ಕೆ ಸ್ಪಷ್ಟನೆ ನೀಡುವಂತೆ ದೇವದಾಸ ಶೆಟ್ಟಿ ಒತ್ತಾಯಿಸಿ, ಲಿಖಿತ ದೂರು ದಾಖಲಿಸಿದರು.

ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಮುಖ್ಯಾಕಾರಿ ಎಂ.ಎಚ್.ಸುಧಾಕರ್, ಸದಸ್ಯರಾದ ಬಿ.ದೇವದಾಸ ಶೆಟ್ಟಿ, ಪ್ರವೀಣ್, ಗಂಗಾಧರ್, ಚಂಚಲಾಕ್ಷಿ, ಜೆಸಿಂತಾ, ಜಗದೀಶ ಕುಂದರ್, ಮುಹಮ್ಮದ್ ಶರೀಫ್, ಮೊನೀಶ್ ಅಲಿ, ವಸಂತಿ ಚಂದಪ್ಪ, ಮುಹಮ್ಮದ್ ಇಕ್ಬಾಲ್ ಗೂಡಿನಬಳಿ, ಸುಗುಣಾ ಕಿಣಿ ಸಮಕ್ಷಮ ಬಜೆಟ್ ಮಂಡಿಸಿದ ಸಂದರ್ಭ ದೇವದಾಸ ಶೆಟ್ಟಿ ಇದಕ್ಕೆ ಆಕ್ಷೇಪ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News