ಭಯೋತ್ಪಾದನೆ ನಿಗ್ರಹ ಕಾಯ್ದೆ ವ್ಯಾಪ್ತಿಗೆ ಹಫೀಝ್ ಸಯೀದ್
ಇಸ್ಲಾಮಾಬಾದ್, ಫೆ. 18: ಮುಂಬೈ ದಾಳಿಯ ಶಂಕಿತ ಸೂತ್ರಧಾರ ಜಮಾತ್ ಉದ್ ದಾವ ಸಂಘಟನೆಯ ಮುಖ್ಯಸ್ಥ ಹಫೀಝ್ ಸಯೀದ್‌ನನ್ನು ಪಂಜಾಬ್ ಪ್ರಾಂತೀಯ ಸರಕಾರವು ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ಕಾಯ್ದೆಯ ವ್ಯಾಪ್ತಿಗೆ ಒಳಪಡಿಸಿದೆ. ಇದು ಭಯೋತ್ಪಾದನೆಯೊಂದಿಗೆ ಆತ ಸಂಬಂಧ ಹೊಂದಿರುವುದನ್ನು ಸ್ಪಷ್ಟವಾಗಿ ಒಪ್ಪಿಕೊಂಡಂತಾಗಿದೆ.
ಪಂಜಾಬ್ ಸರಕಾರವು ಸಯೀದ್ ಮತ್ತು ಆತನ ಸಂಗಡಿಗ ಖಾಝಿ ಕಶೀಫ್ ಎಂಬಾತನನ್ನು ಭಯೋತ್ಪಾದನೆ ನಿಗ್ರಹ ಕಾಯ್ದೆ (ಎಟಿಎ)ಯ ನಾಲ್ಕನೆ ಶೆಡ್ಯೂಲ್‌ಗೆ ಸೇರಿಸಿದೆ ಎಂದುದ ‘ಡಾನ್ ನ್ಯೂಸ್’ ವರದಿ ಮಾಡಿದೆ. ಈ ಪಟ್ಟಿಗೆ ಇತರ ಮೂವರನ್ನೂ ಸೇರಿಸಲಾಗಿದೆ.
ಎಟಿಎಯ ನಾಲ್ಕನೆ ಶೆಡ್ಯೂಲ್‌ಗೆ ಸೇರಿಸಲ್ಪಟ್ಟ ಸಯೀದ್ ಮತ್ತು ಇತರ ನಾಲ್ವರನ್ನು ಜನವರಿ 30ರಂದು ಲಾಹೋರ್‌ನಲ್ಲಿ ಗೃಹಬಂಧನದಲ್ಲಿರಿಸಲಾಗಿತ್ತು.
ಈ ಐದು ಮಂದಿ ‘‘ಜಮಾತ್ ಉದ್ ದಾವ ಮತ್ತು ಫಲಾಹ್-ಇ-ಇನ್‌ಸಾನಿಯತ್ ಸಂಘಟನೆಗಳ ಸಕ್ರಿಯ ಸದಸ್ಯರಾಗಿದ್ದಾರೆ’’ ಎಂಬುದಾಗಿ ಆಂತರಿಕ ಸಚಿವಾಲಯ ತಿಳಿಸಿದೆ ಎಂದು ವರದಿ ಹೇಳಿದೆ.ಈ ವ್ಯಕ್ತಿಗಳ ವಿರುದ್ಧ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಚಿವಾಲಯವು ಭಯೋತ್ಪಾದನೆ ನಿಗ್ರಹ ಇಲಾಖೆಗೆ ಸೂಚಿಸಿತ್ತು.
ಸಯೀದ್ ಮತ್ತು ಇತರ 37 ಜಮಾತ್ ಉದ್ ದಾವ ಮತ್ತು ಎಫ್‌ಐಎಫ್ ನಾಯಕರ ಹೆಸರುಗಳನ್ನು ಈಗಾಗಲೇ ವಿದೇಶ ಸಂಚಾರ ನಿರ್ಬಂಧ ಪಟ್ಟಿಯಲ್ಲಿ ಸೇರಿಸಲಾಗಿದೆ. ಅವರಿಗೆ ದೇಶದಿಂದ ಹೊರಗೆ ಹೋಗುವ ಅವಕಾಶವನ್ನು ನಿಷೇಧಿಸಲಾಗಿದೆ.
ಓರ್ವ ವ್ಯಕ್ತಿ ಎಟಿಎಯ ನಾಲ್ಕನೆ ಶೆಡ್ಯೂಲ್‌ಗೆ ಸೇರ್ಪಡೆಯಾದೊಡನೆ, ಆತ ಯಾವುದಾದರೊಂದು ರೀತಿಯಲ್ಲಿ ಭಯೋತ್ಪಾದನೆಯಲ್ಲಿ ತೊಡಗಿದ್ದಾನೆ ಎಂಬುದಾಗಿ ಭಾವಿಸಲಾಗುತ್ತದೆ.