×
Ad

ಉಡುಪಿ: ಫೆ.23ಕ್ಕೆ ರೋಟರಿ ಶಾಂತಿ ಸಮಾಗಮ

Update: 2017-02-18 20:51 IST

ಉಡುಪಿ, ಫೆ.18: ರೋಟರಿ ವಲಯ 4, ರೋಟರಿ ಜಿಲ್ಲೆ 3182, ಪರ್ಯಾಯ ಶ್ರೀಪೇಜಾವರ ಅಧೋಕ್ಷಜ ಮಠದ ಆಶ್ರಯದಲ್ಲಿ ಫೆ.23ರ ಗುರುವಾರ ಸಂಜೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಱರೋಟರಿ ಶಾಂತಿ ಸಮಾಗಮೞ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ರೋಟರಿ ಅಸ್ಟಿಸ್ಟೆಂಟ್ ಗವರ್ನರ್ ಸುಬ್ರಹ್ಮಣ್ಯ ಬಾಸ್ರಿ ತಿಳಿಸಿದ್ದಾರೆ.

ಶನಿವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಟರಿ ಪ್ರತಿಷ್ಠಾನದ ಶತಮಾನ ಸಂಭ್ರಮ, ಜಾಗತಿಕ ತಿಳುವಳಿಕೆ ದಿನಾಚರಣೆ, ವಿಶ್ವ ಶಾಂತಿ ಸಂದೇಶದ ಉದ್ದೇಶವಿರಿಸಿಕೊಂಡು ಈ ಕಾರ್ಯಕ್ರಮವನ್ನು ಸಂಜೆ 5:15ರಿಂದ 8:30ರವರೆಗೆ ರಾಜಾಂಗಣದಲ್ಲಿ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮವನ್ನು ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಉದ್ಘಾಟಿಸಿ ವಿಶ್ವಶಾಂತಿ ಸಂದೇಶವನ್ನು ನೀಡಲಿದ್ದಾರೆ. ಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ಜಾಗತಿಕ ಶಾಂತಿ ಸಂದೇಶ ನೀಡಿ, ವಿಶ್ವ ರಕ್ಷಣೆಯಲ್ಲಿ ಪರಿಸರ ಸಂರಕ್ಷಣೆಯ ಮಹತ್ವವನ್ನು ವಿವರಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಬಾರಕೂರು ಸೈಂಟ್ ಪೀಟರ್ಸ್ ಚರ್ಚ್‌ನ ಧರ್ಮಗುರುಗಳಾದ ವಂ.ವೆಲೇರಿಯನ್ ಮೆಂಡೋನ್ಸ, ಹಂಗಾರಕಟ್ಟೆಯ ಎಚ್.ಇಬ್ರಾಹಿಂ ಸಾಹೇಬ್, ಮೂಡಬಿದ್ರೆಯ ಮುನಿರಾಜ ರೆಂಜಾಳ್, ಶಿವಮೊಗ್ಗದ ಡಾ.ಪಿ.ನಾರಾಯಣ, ಕುಂದಾಪುರದ ಸದಾನಂದ ಛಾತ್ರ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.

ಕೊನೆಯಲ್ಲಿ ಸ್ನೇಹ, ಶಾಂತಿ, ಸಾಮರಸ್ಯ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ಭಾರತೀಯ ನೃತ್ಯ, ಸಂಗೀತ ಹಾಗೂ ಯಕ್ಷಗಾನ ಕಲೆಗಳ ಪ್ರದರ್ಶನ ನಡೆಯಲಿದೆ ಎಂದವರು ನುಡಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಆಯೋಜನ ಸಮಿತಿಯ ಅಧ್ಯಕ್ಷ ಕರುಣಾಕರ ಶೆಟ್ಟಿ, ಸಂಯೋಜಕ ರಾಮಚಂದ್ರ ಐತಾಳ, ಡಾ.ಸೇಸಪ್ಪ ರೈ, ಡಾ. ಮನೋಜ್ ಕುಮಾರ್ ನಾಗಸಂಪಿಗೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News