‘ತುಂಬಾ ನೋವಾಗುತ್ತಿದೆ’ ಎನ್ನುತ್ತಾ ಪ್ರಾಣ ಬಿಟ್ಟ ಕಿಮ್ ಜಾಂಗ್ ನಾಮ್
ಕೌಲಾಲಂಪುರ, ಫೆ. 18: ‘‘ತುಂಬಾ ನೋವಾಗುತ್ತಿದೆ, ತುಂಬಾ ನೋವಾಗುತ್ತಿದೆ, ನನ್ನ ಮೇಲೆ ದ್ರವ ಪದಾರ್ಥ ಚಿಮುಕಿಸಿದ್ದಾರೆ’’ ಎಂದು ಹೇಳುತ್ತಾ ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಸಹೋದರ ಕಿಮ್ ಜಾಂಗ್ ನಾಮ್ ಪ್ರಾಣ ಬಿಟ್ಟರು ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಕೌಲಾಲಂಪುರ ವಿಮಾನ ನಿಲ್ದಾಣದ ನಾಲ್ಕನೆ ಮಹಡಿಯಲ್ಲಿ ಸೋಮವಾರ ಬೆಳಗ್ಗೆ ಅವರ ಮುಖಕ್ಕೆ ಅಜ್ಞಾತ ದ್ರಾವಣವೊಂದನ್ನು ಚಿಮುಕಿಸಲಾಗಿತ್ತು. ಉತ್ತರ ಕೊರಿಯದ ಸೂಚನೆಯಂತೆ ಇಬ್ಬರು ಮಹಿಳೆಯರು ಈ ಹತ್ಯೆ ನಡೆಸಿದ್ದಾರೆ ಎಂದು ದಕ್ಷಿಣ ಕೊರಿಯದ ಗುಪ್ತಚರ ಸಂಸ್ಥೆಗಳು ಹೇಳಿವೆ.
ತಕ್ಷಣ ತನ್ನ ದೇಹದ ಮೇಲೆ ನಿಯಂತ್ರಣ ಕಳೆದುಕೊಂಡ ಅವರು ತನ್ನ ಸಮೀಪದಲ್ಲಿದ್ದವರಿಂದ ಸಹಾಯವನ್ನು ಯಾಚಿಸಿದರು ಎಂದು ‘ನ್ಯೂಯಾರ್ಕ್ ಪೋಸ್ಟ್’ ಶುಕ್ರವಾರ ವರದಿ ಮಾಡಿದೆ.ವಿಮಾನ ನಿಲ್ದಾಣದಲ್ಲಿ ನಾಮ್ ಸುಮಾರು 50 ಅಡಿ ತಡಕಾಡಿದ ಬಳಿಕ ರಿಸೆಪ್ಶನಿಸ್ಟ್ ಒಬ್ಬರನ್ನು ಸಮೀಪಿಸಿದರು.
ಈ ಸಂದರ್ಭದಲ್ಲಿ ಕುಟುಕು ಜೀವ ಹಿಡಿದುಕೊಂಡಿದ್ದ ಅವರು ಕೆಲವೇ ಕೆಲವು ಮಾತುಗಳನ್ನು ಆಡಲು ಸಮರ್ಥರಾದರು: ‘‘ತುಂಬಾ ನೋವಾಗುತ್ತಿದೆ, ತುಂಬಾ ನೋವಾಗುತ್ತಿದೆ, ನನ್ನ ಮೇಲೆ ದ್ರವ ಪದಾರ್ಥ ಚಿಮುಕಿಸಿದ್ದಾರೆ’’. ಅಂತಿಮವಾಗಿ ಇವೇ ಅವರ ಕೊನೆಯ ಮಾತುಗಳಾದವು.
ಕಿಮ್ ಜಾಂಗ್ ನಾಮ್‌ರ ನೆರವಿಗೆ ಓರ್ವ ಪೊಲೀಸನ್ನು ರಿಸೆಪ್ಶನಿಸ್ಟ್ ಕರೆದರು. ಮೂರನೆ ಮಹಡಿಯಲ್ಲಿರುವ ಕ್ಲಿನಿಕ್‌ಗೆ ಹೋಗಲು ಪೊಲೀಸ್ ನಾಮ್‌ಗೆ ನೆರವು ನೀಡಿದರು.ಆದರೆ, ಅವರು ಶೀಘ್ರವೇ ಪ್ರಜ್ಞಾಹೀನ ಸ್ಥಿತಿಗೆ ತಲುಪಿದರು.ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಂಡ ವೈದ್ಯರು ಅವರನ್ನು ಕೂಡಲೇ ವಿಮಾನ ನಿಲ್ದಾಣದ ಸಮೀಪದ ಪುತ್ರಜಯ ಆಸ್ಪತ್ರೆಗೆ ಕಳುಹಿಸಿದರು. ಆದರೆ, ಅದಾಗಲೇ ತುಂಬಾ ತಡವಾಗಿತ್ತು.
ಆಸ್ಪತ್ರೆಗೆ ಬರುವ ಮೊದಲೇ ಅವರು ಮೃತಪಟ್ಟಿದ್ದಾರೆ ಎಂಬುದಾಗಿ ಆಸ್ಪತ್ರೆ ಘೋಷಿಸಿತು.
ನಾಲ್ಕನೆ ಆರೋಪಿ ಬಂಧನ
ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಸಹೋದರ ಕಿಮ್ ಜಾಂಗ್ ನಾಮ್‌ರ ಹತ್ಯೆಗೆ ಸಂಬಂಧಿಸಿ ಉತ್ತರ ಕೊರಿಯದ ವ್ಯಕ್ತಿಯೊಬ್ಬನನ್ನು ತಾವು ಬಂಧಿಸಿರುವುದಾಗಿ ಮಲೇಶ್ಯ ಪೊಲೀಸರು ಶನಿವಾರ ಹೇಳಿದ್ದಾರೆ.
ಬಂಧಿತ ವ್ಯಕ್ತಿಯನ್ನು ರಿ ಜಾಂಗ್ ಚೊಲ್ ಎಂದು ಗುರುತಿಸಲಾಗಿದೆ. ಆತನನ್ನು ಸೆಲೆಂಗರ್ ರಾಜ್ಯದಲ್ಲಿ ಶುಕ್ರವಾರ ರಾತ್ರಿ ಬಂಧಿಸಲಾಯಿತು ಎಂದು ಪೊಲೀಸರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.ಕಿಮ್ ಜಾಂಗ್ ನಾಮ್ ಹತ್ಯೆಗೆ ಸಂಬಂಧಿಸಿ ಇದುವರೆಗೆ ಬಂಧನಕ್ಕೊಳಗಾದ ನಾಲ್ಕನೆ ಶಂಕಿತ ಆತನಾಗಿದ್ದಾನೆ.
ಉತ್ತರ ಕೊರಿಯದ ಸರ್ವಾಧಿಕಾರಿಯ ದಿವಂಗತ ತಂದೆಯ ಇನ್ನೊಂದು ಪತ್ನಿಯ ಮಗ ಕಿಮ್ ಜಾಂಗ್ ನಾಮ್‌ರನ್ನು ಕೌಲಾಲಂಪುರ ವಿಮಾನ ನಿಲ್ದಾಣದಲ್ಲಿ ಸೋಮವಾರ ಇಬ್ಬರು ಮಹಿಳೆಯರು ವಿಷ ಪ್ರಯೋಗ ಮಾಡಿ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ವಿಷ ಪರೀಕ್ಷಾ ವರದಿಗೆ 2 ವಾರ
ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಸಹೋದರ ಕಿಮ್ ಜಾಂಗ್ ನಾಮ್ ಮೃತದೇಹದ ವಿಷ ಪರೀಕ್ಷಾ ವರದಿ ಬರಲು ಎರಡು ವಾರಗಳು ಬೇಕಾಗಬಹುದು ಎಂದು ಮಲೇಶ್ಯದ ಆರೋಗ್ಯ ಸಚಿವ ಎಸ್. ಸುಬ್ರಮಣಿಯಮ್ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
‘‘ಸಾವಿಗೆ ಕಾರಣವೇನು ಎಂಬುದನ್ನು ಕಂಡುಹಿಡಿಯಲು ಸಾಮಾನ್ಯವಾಗಿ ಎರಡು ವಾರಗಳು ಬೇಕಾಗುತ್ತವೆ. ಖಚಿತವಾಗಿ ಏನನ್ನಾದರೂ ಹೇಳಲು ಸಾಧ್ಯವಾಗುವವರೆಗೆ ನಮಗೆ ವರದಿಯನ್ನು ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ’’ ಎಂದರು.