ಮನುಷ್ಯನನ್ನು ಆರೋಗ್ಯವಂತ ಮನೋಸ್ಥಿತಿಗೆ ತಲುಪಿಸುವುದೇ ಶಿಕ್ಷಣದ ಗುರಿ: ಡಾ.ಬಿಎಂ.ಹೆಗ್ಡೆ
ಮಂಗಳೂರು,ಫೆ.16:ಮನುಷ್ಯನನ್ನು ಆರೋಗ್ಯವಂತ ಮನೋಸ್ಥಿತಿಗೆ ತಲುಪಿಸುವುದೇ ಶಿಕ್ಷಣದ ಮುಖ್ಯ ಗುರಿಯಾಗಿದೆ ಹೊರತು ಕೇವಲ ಹಣ,ಸಂಪತ್ತಿನ ಸಂಗ್ರಹ ಮಾಡಲು ಕಲಿಸುವುದು ಶಿಕ್ಷಣದ ಗುರಿಯಲ್ಲ ಎಂದು ಮಣಿಪಾಲ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಬಿ.ಎಂ.ಹೆಗ್ಡೆ ತಿಳಿಸಿದ್ದಾರೆ.
ಪಂಪ್‌ವೆಲ್ ವೃತ್ತದ ಬಳಿ ಇರುವ ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿ ಸಭಾಂಗಣದಲ್ಲಿ ಕರ್ಣಾಟಕ ಬ್ಯಾಂಕ್ ಸಂಸ್ಥಾಪಕರ ದಿನಾಚರಣೆ ಸಮಾರಂಭದಲ್ಲಿ 'ಮಾನವ -ಹಣ ಮತ್ತು ಸಂತೋಷ' ಎಂಬ ವಿಷಯದ ಬಗ್ಗೆ ಅವರು ಶನಿವಾರ ಉಪನ್ಯಾಸ ನೀಡುತ್ತಿದ್ದರು.
ಪ್ರಸಕ್ತ ಇರುವ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಸಂಪತ್ತನ್ನು ಹೊಂದುವುದು ಹೇಗೆ ಎಂದು ಕಲಿಸಲಾಗುತ್ತಿದೆ.ಹಣ,ಸಂಪತ್ತು ನಮ್ಮ ಸಂತೋಷವನ್ನು ಕೊಲ್ಲುತ್ತದೆ.ಅದೊಂದು ಅಫೀಮು ಇದ್ದ ಹಾಗೆ.ಹಣ,ಸಂಪತ್ತಿನ ಸಂಗ್ರಹದ ಹಿಂದೆ ಬಿದ್ದ ಪ್ರಪಂಚ ಮಾನವೀಯ ಸಂವೇದನೆಗಳನ್ನು ಕಳೆದುಕೊಂಡು ರೋಗಗ್ರಸ್ಥರಾಗುತ್ತಿರುವುದು ಕಂಡು ಬಂದಿದೆ ಎಂದು ಬಿ.ಎಂ.ಹೆಗ್ಡೆ ತಿಳಿಸಿದರು.
ಹಣದ ಮೇಲಿನ ಮೋಹ ದಿಂದ ಭೃಷ್ಟ ಗೊಳ್ಳುತ್ತಿರುವ ಸಾಮಾಜಿಕ ಸೇವಾ ರಂಗಗಳು:
ಹಣದ ಮೇಲಿನ ಮೋಹ ವೈದ್ಯಕೀಯ,ರಾಜಕೀಯ ಹಾಗೂ ಸಮಾಜದ ವಿವಿಧ ಕ್ಷೆತ್ರಗಳನ್ನು ಭೃಷ್ಟಗೊಳ್ಳುವಂತೆ ಮಾಡಿದೆ.ಸಿರಿಯಾದಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಲಕ್ಷಾಂತರ ಜನರು ಸಾವಿಗೀಡಾಗುತ್ತಿದ್ದಾರೆ. ಅದರ ಹಿಂದೆ ಶಸ್ತ್ರ ಮಾರಾಟಗಳನ್ನು ಮಾಡಿ ಕೋಟ್ಯಾಂತರ ರೂ ಹಣ ಗಳಿಸುತ್ತಿರುವ ಕಂಪೆನಿಗಳ ಅಮಾನವೀಯ ಆರ್ಥಿಕ ವ್ಯವಹಾರ ನಡೆಯುತ್ತಿದೆ ಎಂದು ಬಿ.ಎಂ.ಹೆಗ್ಡೆ ತಿಳಿಸಿದರು.
ವೈಜ್ಞಾನಿಕ ಆವಿಷ್ಕಾರದ ಮೂಲಕ ವೈದ್ಯಕೀಯ ರಂಗದಲ್ಲಿ ಆಗಿರುವ ಬೆಳವಣಿಗೆ ಮಾನವೀಯತೆಯನ್ನು ಮರೆತು ಕೇವಲ ಹಣ ಗಳಿಕೆಯ ಸಾಧನವಾಗಿರುವುದು ಇನ್ನೊಂದು ಅಹಿತಕರ ಬೆಳವಣಿಗೆಯಾಗಿದೆ.ಪರಿಣಾಮವಾಗಿ ಅಗತ್ಯವಿಲ್ಲದಿದ್ದರೂ ವಿಮಾ ಹಣದ ಆಸೆಗೆ ಬಿದ್ದು ಸಿಸೇರಿಯನ್ ನಡೆಸುವವರು,ಹೃದಯ ರೋಗಿಗಳಿಗೆ ಆ್ಯಂಜಿಯೋಪ್ಲಾಸ್ಟ್‌ನಂತಹ ಚಿಕಿತ್ಸೆ ನಡೆಸುವ ಘಟನೆಗಳು ಹೆಚ್ಚುತ್ತಿವೆ.ಅರ್ಸೆನಿಕ್ ಹೊಂದಿರು ಕಾಡಿಗೆ,ಸೀಸವನ್ನು ಹೊಂದಿರುವ ಲಿಪ್ ಸ್ಟಿಕ್ ಮಾರಾಟದಂತಹ ಕಾಸ್ಮೆಟಿಕ್ ವಸ್ತುಗಳು ಭಾರತದಲ್ಲಿ ಪ್ರತಿವರ್ಷ 6,049 ಕೋಟಿ ರೂ ವ್ಯವಹಾರದ ಉದ್ಯಮವಾಗಿದೆ ಎಂದು ಡಾ.ಬಿ.ಎಂ.ಹೆಗ್ಡೆ ತಿಳಿಸಿದರು.
ಕ್ಯಾನ್ಸರ್‌ಗೆ ಪ್ರಮುಖ ಕಾರಣವಾದ ಆಲ್ಕೋಹಾಲ್,ತಂಬಾಕಿಗೆ ನಿಷೇಧ ಏಕಿಲ್ಲ:-ದೇಶದಲ್ಲಿ ಶೇ 73ರಷ್ಟು ಜನರು ಕ್ಯಾನ್ಸರ್ ಗೆ ತುತ್ತಾಗಲು ಆಲ್ಕೋಹಾಲ್ ಮತ್ತು ತಂಬಾಕು ಸೇವನೆ ಕಾರಣವಾಗಿದೆ.ಆದರೆ ಅದನ್ನು ಸಂಪೂರ್ಣವಾಗಿ ನಿಷೇಧಿಸುವ ರಾಜಕೀಯ ಇಚ್ಚಾಶಕ್ತಿಗೆ ಹಣದ ಮೇಲಿನ ವ್ಯಾಮೋಹ ಪ್ರಮುಖ ಅಡ್ಡಿಯಾಗಿದೆ .ಉಳಿದ ಶೇ 10ರಷ್ಟು ಕ್ಯಾನ್ಸರ್ ಕೀಟನಾಶಕಗಳಿಂದ ಕೂಡಿದ ಆಹಾರ ಸೇವನೆಯಿಂದ ಬರುತ್ತಿದೆ ಎಂಬ ವೈಜ್ಞಾನಿಕ ವರದಿ ಇದೆ.ಈ ನಿಟ್ಟಿನಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮದ್ಯಪಾನ ನಿಷೇಧದ ಬಗ್ಗೆ ತೆಗೆದುಕೊಂಡಿರುವ ನಿರ್ಧಾರ ಒಳ್ಳೆಯ ಬೆಳವಣಿಗೆ ಎಂದು ಬಿ.ಎಂ.ಹೆಗ್ಡೆ ತಿಳಿಸಿದರು.
ಮಾನವ ಸಂತೋಷವನ್ನು ಇನ್ನೆಲ್ಲಿಯೋ ಹುಡುಕಿಕೊಂಡು ಹೋಗಬೇಕಾಗಿಲ್ಲ ಆತನೊಳಗೆ ಇದೆ.ತನ್ನೊಳಗಿನ ಸಂತೋಷವನ್ನು ಪಡೆಯಬೇಕಾದರೆ ನಾನು ಎಂಬ ಅಹಂ ನ್ನು ತೊರೆಯಬೇಕಾಗಿದೆ.ಸಂತೋಷವನ್ನು ಹುಡುಕಿಕೊಂಡು ಹೋಗುವುದರ ಬದಲು ಅದನ್ನು ಇನ್ನೊಬ್ಬರಿಗೆ ಕೊಡುವ ಮೂಲಕ ನಾವು ಸಂತೋಷದಿಂದ ಇರಲು ಸಾಧ್ಯ ಎಂದು ಬಿ.ಎಂ.ಹೆಗ್ಡೆ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಜಯರಾಮಭಟ್ ವಹಿಸಿ ಅತಿಥಿಗಳನ್ನು ಅಭಿನಂದಿಸಿದರು.ಬ್ಯಾಂಕಿನ ಹುಟ್ಟು,ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಕಾರಣರಾದವರನ್ನು ಸ್ಮರಿಸಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.ಸಿಜಿಎಂ ಮಹಾಬಲೇಶ್ವರ ಎಂ.ಎಸ್ ಸ್ವಾಗತಿಸಿದರು.ಸಿಎಸ್‌ಆರ್ ವತಿಯಿಂದ ನೀಡಲಾಗುವ ಕೊಡುಗೆಯ ಬಗ್ಗೆ ಎಜಿಎಂ ರೇಣುಕ ಎಂ ಬಂಗೇರಾ ವಿವರ ನೀಡಿದರು.ಬ್ಯಾಂಕಿನ ಜಿಎಂ ಚಂದ್ರಶೇಖರ ರಾವ್ ವಂದಿಸಿದರು.
ಇದೇ ಸಂದರ್ಭದಲ್ಲಿ ಪ್ರೀಯಾ ಸಹೊದರಿಯರ ಕರ್ಣಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.ಪಕ್ಕವಾದ್ಯದಲ್ಲಿ ವಿದ್ವಾನ್‌ಗಳಾದ ಎಂ.ಎ.ಕೃಷ್ಣಸ್ವಾಮಿ ವಯೋಲಿನ್,ನೈವೇಲಿ ಸ್ಕಂದ ಸುಬ್ರಹ್ಮಣ್ಯಮ್ ಮೃದಂಗ,ಬಿ.ಎಸ್.ಪರುಷೋತ್ತಮ ಕಂಜಿರದಲ್ಲಿ ಸಹಕರಿಸಿದರು.