ಬೆಳ್ತಂಗಡಿಗೆ ಸಂಚಾರಿ ಪೊಲೀಸ್ ಠಾಣೆ ಮಂಜೂರು
ಬೆಳ್ತಂಗಡಿ, ಫೆ.18: ಹಲವಾರು ವರ್ಷಗಳಿಂದ ಬೇಡಿಕೆಯಲ್ಲಿದ್ದ ದ.ಕ ಜಿಲ್ಲೆಯ ಅತೀದೊಡ್ಡ ತಾಲೂಕು ಬೆಳ್ತಂಗಡಿಗೆ ಸಂಚಾರಿ ಪೊಲೀಸ್ ಠಾಣೆ ಮಂಜೂರುಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಧರ್ಮಸ್ಥಳ ಪೊಲೀಸ್ ಠಾಣೆ ಆರಂಭಗೊಂಡಿರುವುದರಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ಕಾರ್ಯನಿರ್ವಹಣೆಯ ಹೊರೆ ಕಡಿಮೆಯಾಗಿದ್ದರೂ, ಕಾನೂನು ಸುವ್ಯವಸ್ಥೆಯ ದೃಷ್ಟಿಯಲ್ಲಿ ಸಂಚಾರಿ ಪೋಲಿಸ್ ಠಾಣೆಯ ಬಗ್ಗೆ ಸರಕಾರಕ್ಕೆ ಮನವಿ ಮಾಡಲಾಗಿತ್ತು. ಗುರುವಾಯನಕೆರೆಯಿಂದ ಉಜಿರೆಯವರೆಗೆ ಟ್ರಾಫಿಕ್ ಸಮಸ್ಯೆ, ಪಾರ್ಕಿಂಗ್ ಸಮಸ್ಯೆ ತಲೆದೋರಿತ್ತು.
ಇದಲ್ಲದೆ ಹೆಲ್ಮೆಟ್ ರಹಿತ ಪ್ರಯಾಣ, ದಾಖಲೆ, ಪರವಾನಿಗೆ ಇನ್ನಿತರ ಕಾನೂನು ರಹಿತವಾಗಿರುವವರ ಬಗ್ಗೆ ನಿಗಾ ವಹಿಸಲು ಸಿಬ್ಬಂದಿ ಕೊರತೆ ಇತ್ತು. ಇದರ ನಡುವೆಯೂ ಬೆಳ್ತಂಗಡಿ ಹಾಗೂ ಧರ್ಮಸ್ಥಳ ಪೊಲೀಸರು ಪ್ರಮುಖ ನಗರ ಕೇಂದ್ರಗಳಾದ ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ, ಗುರುವಾಯನಕೆರೆಗಳಲ್ಲಿ ಸಂಚಾರಿ ನಿರ್ವಹಣೆ ಕರ್ತವ್ಯ ನಿರ್ವಹಿಸುತ್ತಿದ್ದರು.
ಇತ್ತೀಚೆಗೆ ಧರ್ಮಸ್ಥಳಕ್ಕೆ ಗೃಹಸಚಿವ ಪರಮೇಶ್ವರ ಭೇಟಿ ನೀಡಿದ್ದ ಸಂದರ್ಭ ಬೆಳ್ತಂಗಡಿಗೆ ಸಂಚಾರಿ ಪೊಲೀಸ್ ಠಾಣೆ ಅಗತ್ಯವಿರುವ ಬಗ್ಗೆ ಶಾಸಕ ವಸಂತ ಬಂಗೇರ ಅವರು ಮನವಿ ಮಾಡಿದ್ದರು.
ನಂತರ ಸಲ್ಲಿಸಿದ ಪ್ರಸ್ಥಾವನೆಗೆ ರಾಜ್ಯ ಸರಕಾರ ಗುರುವಾರ ಮಂಜೂರಾತಿ ನೀಡಿದೆ. ಈಗಾಗಲೇ ಮಂಗಳೂರು, ಬಂಟ್ವಾಳ ಹಾಗೂ ಪುತ್ತೂರಿನಲ್ಲಿ ಸಂಚಾರಿ ಪೊಲೀಸ್ ಠಾಣೆ ಕಾರ್ಯಾಚರಿಸುತ್ತಿದ್ದು, ಇನ್ನು ಕಲವೇ ದಿನಗಳಲ್ಲಿ ಉಜಿರೆಯನ್ನು ಕೇಂದ್ರೀಕರಿಸಿ ಬೆಳ್ತಂಗಡಿಯ ಸಂಚಾರಿ ಪೊಲೀಸ್ ಠಾಣೆ ಕಾರ್ಯನಿರ್ವಹಿಸಲಿದೆ.