ಉಡುಪಿ: ಮೃತದೇಹ ಪತ್ತೆ; ಕೊಲೆ ಶಂಕೆ
Update: 2017-02-18 23:34 IST
ಉಡುಪಿ, ಫೆ.18: ನಗರದ ಶಿರಿಬೀಡು ಸಮೀಪದ ಖಾಲಿ ಜಾಗದಲ್ಲಿ ಸುಮಾರು 30-35 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಫೆ.17ರಂದು ಅಪರಾಹ್ನ 3ಗಂಟೆ ಸುಮಾರಿಗೆ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತಪಡಿಸಲಾಗಿದೆ.
ಈ ವ್ಯಕ್ತಿ 2-3ದಿನಗಳ ಹಿಂದೆ ಪದ್ಮನಾಭ ಕಾಮತ್ ಎಂಬವರ ಖಾಲಿ ಜಾಗದಲ್ಲಿ ಮೃತಪಟ್ಟಿದ್ದು, ಮೃತದೇಹ ಸಂಪೂರ್ಣ ಕೊಳೆತು ಹೋಗಿದೆ. ಇವರನ್ನು ಯಾರೋ ಕೊಲೆ ಮಾಡಿ ಅಥವಾ ಇನ್ನಾವುದೋ ರೀತಿಯಿಂದ ಸಾಯಿಸಿರಬಹುದು ಎಂದು ಸಂಶಯ ವ್ಯಕ್ತವಾಗಿದ್ದು, ಮೃತದೇಹವನ್ನು ಮಣಿಪಾಲ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಮೃತವ್ಯಕ್ತಿಯು 169ಸೆ.ಮೀ. ಉದ್ದ ಇದ್ದು, ಎಡಕೈ ತೋಳಿನಲ್ಲಿ ಅಕ್ಷತಾ, ಸುಜಾತಾ ಮತ್ತು ಚೈತ್ರ ಎಂಬುದಾಗಿ ಬರೆಯಲಾಗಿದೆ. ಬಲಗೈಯಲ್ಲಿ ಹಳಿನಾ ಎಂಬ ಹಚ್ಚೆ ಇದೆ. ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಹಾಗೂ ಮಾಸಿದ ಬಣ್ಣದ ಟಿ ಶರ್ಟ್ ಧರಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.