150 ವರ್ಷಗಳಿಂದ ಸುಪ್ತವಾಗಿದ್ದ ಭಾರತದ ಏಕೈಕ ಜೀವಂತ ಜ್ವಾಲಾಮುಖಿ ಮತ್ತೆ ಚುರುಕು
ಪಣಜಿ, ಫೆ.18: ಸುಮಾರು 150 ವರ್ಷಗಳಿಂದ ಸುಪ್ತವಾಗಿದ್ದು ಆ ಬಳಿಕ 1991ರಲ್ಲಿ ಕ್ರಿಯಾಶೀಲತೆ ತೋರಿಸಲು ಆರಂಭಿಸಿದ್ದ, ಅಂಡಮಾನ್ ಮತ್ತು ನಿಕೊಬಾರ್ ದ್ವೀಪದಲ್ಲಿರುವ ಭಾರತದ ಏಕೈಕ ಜೀವಂತ ಜ್ವಾಲಾಮುಖಿ ಇದೀಗ ಚುರುಕಾಗಿದ್ದು ನಿರಂತರವಾಗಿ ಬೂದಿ ಮತ್ತು ಲಾವಾ ಕಾರಲು ಆರಂಭಿಸಿದೆ ಎಂದು ಗೋವಾದಲ್ಲಿರುವ ರಾಷ್ಟ್ರೀಯ ಸಾಗರವಿಜ್ಞಾನ ಅಕಾಡಮಿಯ (ಎನ್‌ಐಒ) ಸಂಶೋಧಕರು ತಿಳಿಸಿದ್ದಾರೆ. ಅಂಡಮಾನ್ ಮತ್ತು ನಿಕೊಬಾರ್ ದ್ವೀಪದಲ್ಲಿರುವ, ಪೋರ್ಟ್‌ಬ್ಲೇರ್‌ನಿಂದ ಈಶಾನ್ಯಕ್ಕೆ 140 ಕಿ.ಮೀ ದೂರವಿರುವ ಪರ್ವತದಿಂದ ಜ್ವಾಲಾಮುಖಿ ಮತ್ತೆ ಹೊರಚಿಮ್ಮಲು ಆರಂಭವಾಗಿದೆ. ಸುಮಾರು 150 ವರ್ಷಗಳಿಂದ ಸ್ತಬ್ಧವಾಗಿದ್ದ ಈ ಜ್ವಾಲಾಮುಖಿ 1991ರಲ್ಲಿ ಕ್ರಿಯಾಶೀಲಗೊಂಡಿದ್ದು ಆ ಬಳಿಕ ಆಗಿಂದಾಗ್ಗೆ ತನ್ನ ಚಟುವಟಿಕೆ ತೋರ್ಪಡಿಸುತ್ತಿದೆ ಎಂದು ಅಕಾಡಮಿಯ ಪ್ರಕಟಣೆ ತಿಳಿಸಿದೆ. 2017ರ ಜನವರಿ 23ರ ಅಪರಾಹ್ನ ವಿಜ್ಞಾನಿಗಳ ತಂಡವೊಂದು ಸಿಎಸ್‌ಐಆರ್-ಎನ್‌ಐಒ ದ ಸಂಶೋಧನಾ ನೌಕೆ ಆರ್.ವಿ. ಸಿಂಧುಸಂಕಲ್ಪದಲ್ಲಿ ಅಂಡಮಾನ್‌ನ ಈ ಪರ್ವತದ ಬಳಿ ಸಂಶೋಧನಾ ಕಾರ್ಯದಲ್ಲಿ ನಿರತರಾಗಿದ್ದಾಗ ಏಕಾಏಕಿ ಈ ಅಗ್ನಿಪರ್ವತ ಬೂದಿಯನ್ನು ಕಾರತೊಡಗಿತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ತಕ್ಷಣ ತಂಡದವರು ಅಲ್ಲಿಂದ ಸುಮಾರು 1 ಮೈಲಿನಷ್ಟು ದೂರಕ್ಕೆ ತೆರಳಿ, ಜ್ವಾಲಾಮುಖಿಯನ್ನು ವೀಕ್ಷಿಸಿದರು. ಐದು-ಹತ್ತು ನಿಮಿಷಕ್ಕೊಮ್ಮೆ ಸಣ್ಣ ಸಣ್ಣ ಅಧ್ಯಾಯದಂತೆ ಈ ಬೂದಿಯುಗುಳುವ ಕಾರ್ಯ ಮುಂದುವರಿಯಿತು. ಹಗಲು ಹೊತ್ತಿನಲ್ಲಿ ಮಾತ್ರ ಬೂದಿಯ ಮೋಡಗಳು ಗೋಚರಿಸುತ್ತವೆ ಎಂದು ಅವರು ತಿಳಿಸಿದ್ದಾರೆ. ಸೂರ್ಯಾಸ್ತದ ವೇಳೆ ಕೆಂಪಗಿನ ಲಾವಾರಸ ಕಾರಂಜಿಯಂತೆ ಮೇಲಕ್ಕೆ ಚಿಮ್ಮಿ, ಅಗ್ನಿಪರ್ವತದ ಬುಡದುದ್ದಕ್ಕೂ ಹರಿದು ಬಂತು. 2017ರ ಜನವರಿ 26ರಂದು ಮತ್ತೊಮ್ಮೆ ಈ ಅಗ್ನಿಪರ್ವತದ ಕಡೆಗೆ ತೆರಳಿದಾಗಲೂ ಅಗ್ನಿಪರ್ವತದಿಂದ ನಿರಂತರ ಸ್ಫೋಟದ ಸದ್ದು ಕೇಳಿ ಬರುತ್ತಿತ್ತು ಮತ್ತು ಹೊಗೆ ರಭಸದಿಂದ ಚಿಮ್ಮುತ್ತಿತ್ತು. ಈ ಪ್ರದೇಶ ವ್ಯಾಪ್ತಿಯಿಂದ ಸಂಗ್ರಹಿಸಿದ ನೀರಿನ ಸ್ಯಾಂಪಲ್ ಪರೀಕ್ಷಿಸಿದಾಗ ಇದು ಜ್ವಾಲಾಮುಖಿ ವಿಸರ್ಜನೆಯ ಅಂಶವನ್ನು ಹೊಂದಿರುವುದು ಸ್ಪಷ್ಟವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.