ಡಿಎಂಕೆ ಕಾರ್ಯಕಾರಿ ಅಧ್ಯಕ್ಷ ಎಂಕೆ ಸ್ಟಾಲಿನ್ ವಿರುದ್ಧ ಎಫ್‌ಐಆರ್
ಚೆನ್ನೈ, ಫೆ.19: ಡಿಎಂಕೆ ಕಾರ್ಯಕಾರಿ ಅಧ್ಯಕ್ಷ ಎಂಕೆ ಸ್ಟಾಲಿನ್ ವಿರುದ್ಧ ರವಿವಾರ ಎಫ್‌ಐಆರ್ ದಾಖಲಾಗಿದೆ.
ಪಳನಿಸ್ವಾಮಿ ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದ ಬಳಿಕ ಸ್ಟಾಲಿನ್ ನೇತೃತ್ವದಲ್ಲಿ ಡಿಎಂಕೆ ಪಕ್ಷ ಚೆನ್ನೈನ ಮರಿನಾ ಬೀಚ್‌ನಲ್ಲಿ ಪ್ರತಿಭಟನೆ ನಡೆಸಿತ್ತು. ತಮ್ಮಪಕ್ಷದವರನ್ನು ಸದನದಿಂದ ಹೊರಹಾಕಿ ವಿಶ್ವಾಸ ಮತಯಾಚಿಸಿದ್ದು ಸಂವಿಧಾನ ವಿರೋಧಿ ಎಂದು ಆರೋಪಿಸಿ ಡಿಎಂಕೆ ಪಕ್ಷ ಪ್ರತಿಭಟನೆ ನಡೆಸಿತ್ತು. ಸ್ಟಾಲಿನ್ ಹಾಗೂ ಅವರ ಬೆಂಬಲಿಗರನ್ನು ಬಂಧಿಸಿದ ಪೊಲೀಸರು ಬಳಿಕ ಬಿಡುಗಡೆ ಮಾಡಿದ್ದರು.
ಇದೇವೇಳೆ, ರವಿವಾರ ಸ್ಟಾಲಿನ್ ಅವರು ಡಿಎಂಕೆ ಮುಖ್ಯಕಚೇರಿಯಲ್ಲಿ ಪಕ್ಷದ ಶಾಸಕರ ವಿಶೇಷ ಸಭೆ ಕರೆದಿದ್ದಾರೆ.
ಎಡಪ್ಪಾಡಿ ಕೆ. ಪಳನಿಸ್ವಾಮಿ ವಿಶ್ವಾಸ ಮತ ಗೆದ್ದ ಬಳಿಕ ರಾಜ್ಯಪಾಲರಿಗೆ ಪತ್ರ ಬರೆದಿದ್ದ ಸ್ಟಾಲಿನ್ ರಾಜ್ಯಪಾಲರು ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದ್ದರು.
ಶನಿವಾರ ತಮಿಳುನಾಡಿನ ವಿಧಾನಸಭೆಯಲ್ಲಿ ಭಾರೀ ಕೋಲಾಹಲದ ನಡುವೆ ಪಳನಿಸ್ವಾಮಿ 122 ಮತಗಳ ಅಂತರದಿಂದ ವಿಶ್ವಾಸಮತವನ್ನು ಗೆದ್ದುಕೊಂಡಿದ್ದರು.
ಶನಿವಾರ ನಡೆದ ಸರಕಾರದ ವಿಶ್ವಾಸ ಮತ ಯಾಚನೆಯ ವೇಳೆ ಗಲಾಟೆಯ ಹಿನ್ನೆಲೆಯಲ್ಲಿ ಮಧ್ಯಾಹ್ನ 3 ಗಂಟೆಗೆ ಕಲಾಪವನ್ನು ಮುಂದೂಡಲಾಗಿತ್ತು. ಆದರೆ, 2 ಗಂಟೆಗೆ ಪೊಲೀಸರು ಆಗಮಿಸಿ ನಮ್ಮನ್ನು ಬಲವಂತವಾಗಿ ಸದನದಿಂದ ಹೊರ ಹಾಕಿದ್ದರು. ಈ ವೇಳೆ ನನ್ನ ಅಂಗಿಯನ್ನು ಹರಿದು ಹಾಕಿದ್ದಾರೆ ಎಂದು ಸ್ಟಾಲಿನ್ ಆರೋಪಿಸಿದ್ದಾರೆ