ಎಪ್ರಿಲ್‌ನಿಂದ ಕೇರಳಕ್ಕೆ ಸಕ್ಕರೆ ಇಲ್ಲ: ಕೇಂದ್ರ ಸರಕಾರ

Update: 2017-02-19 11:10 GMT

 ತಿರುವನಂತಪುರಂ,ಫೆ. 19: ಬೆಲೆಯೇರಿಕೆಯಿಂದ ತತ್ತರಿಸಿದ ಕೇರಳಕ್ಕೆ ಕೇಂದ್ರ ಸರಕಾರದಿಂದ ಮತ್ತೊಂದು ಹೊಡೆತ ಬಿದ್ದಿದೆ. ಎಪ್ರಿಲ್‌ನಿಂದ ಪಡಿತರ ಅಂಗಡಿ ಮೂಲಕ ಸಕ್ಕರೆ ವಿತರಣೆ ನಡೆಸಲು ಸಾಧ್ಯವಿಲ್ಲ ಹಾಗೂ ಕಡಿತ ಗೊಳಿಸಿದ ಸೀಮೆ ಎಣ್ಣೆಯನ್ನು ಹೆಚ್ಚಿಸುವುದಿಲ್ಲ ಎಂದು ಕೇಂದ್ರ ಆಹಾರ ಸಚಿವಾಲಯ ಕೇರಳ ಸರಕಾರಕ್ಕೆ ತಿಳಿಸಿದೆ. ಸಬ್ಸಿಡಿ ಮೂಲಕ ಸಕ್ಕರೆ ವಿತರಣೆ ಮಾಡುವುದರಿಂದ ಪ್ರತಿತಿಂಗಳು ರೂ.16 ಕೋಟಿಯ ಹೆಚ್ಚುವರಿ ಖರ್ಚು ತಗಲುತ್ತದೆ. ಆದ್ದರಿಂದ ಸಕ್ಕರೆಗೆ ಹಣವನ್ನು ಎಪ್ರಿಲ್‌ನಿಂದ ನೀಡುವುದಿಲ್ಲ ಎಂದು ಕೇಂದ್ರ ಆಹಾರ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಕೇರಳ ಸಚಿವ ಪಿ. ತಿಲೋತ್ತಮನ್‌ರಿಗೆ ತಿಳಿಸಿದ್ದಾರೆ.

ಕೇರಳ,ತಮಿಳ್ನಾಡು, ಆಂಧ್ರ, ತೆಲಂಗಾಣ, ಕರ್ನಾಟಕ ಮುಂತಾದ ಆರು ರಾಜ್ಯಗಳಿಗೆ ಸಬ್ಸಿಡಿ ದರದಲ್ಲಿ ಸಕ್ಕರೆ ವಿತರಣೆ ನಡೆಸಲಾಗುತ್ತಿದೆ. ಈ ಆರ್ಥಿಕ ವರ್ಷದಲ್ಲಿ ಇದಕ್ಕಾಗಿ 200ಕೋಟಿರೂಪಾಯಿ ಮಾತ್ರ ಬಜೆಟ್‌ನಲ್ಲಿ ಇರಿಸಿದೆ. ಇದು ಹಿಂದಿನ ಓಪನ್ ಮಾರ್ಕೆಟ್‌ನಲ್ಲಿ ಸಕ್ಕರೆ ಖರೀದಿಸಿದ್ದಕ್ಕೆ ನೀಡಲಿಕ್ಕಿದೆ. ಕೇರಳಕ್ಕೆ ಸುಮಾರು 80 ಕೊಟಿ ರೂಪಾಯಿ ಈ ವಿಭಾಗದಲ್ಲಿ ಸಿಗಬೇಕಿದೆ. ಹೊಸದಾಗಿ ಸಕ್ಕರೆ ಖರೀದಿಸಲು ಕೇಂದ್ರ ಬಜೆಟ್‌ನಲ್ಲಿ ವಿಶೇಷ ಹಣವನ್ನು ಮೀಸಲಿರಿಸಿಲ್ಲ ಎಂದು ಸಚಿವ ಪಿ.ತಿಲೋತ್ತಮನ್ ತಿಳಿಸಿದ್ದಾರೆ.

 ರಾಜ್ಯಕ್ಕೆ ಅಗತ್ಯವೆಂದಾದರೆ ಸ್ವಂತ ಖರ್ಚಿನಲ್ಲಿ ಸಕ್ಕರೆ ಖರೀದಿಸಿ ಸಬ್ಸಿಡಿ ದರದಲ್ಲಿ ವಿತರಣೆ ನಡೆಸಬಹುದೆಂದು ಕೇಂದ್ರ ಸರಕಾರ ತಿಳಿಸಿದೆ. ಆದರೆ ಕೇರಳ ಸರಕಾರಕ್ಕೆ ಹಾಗೆ ಮಾಡಲು ಸಾಧ್ಯವಿಲ್ಲ. 192 ಕೋಟಿ ರೂಪಾಯಿಯ ಹೆಚ್ಚುವರಿ ಖರ್ಚು ತಗಲುತ್ತದೆ. ಆಹಾರ ಸುರಕ್ಷೆ ಕಾನೂನು ಪ್ರಕಾರ ಎಲ್ಲ ಪಡಿತರ ಚೀಟಿಗೆ ಸಬ್ಸಿಡಿ ದರದಲ್ಲಿ ಅಕ್ಕಿ ವಿತರಣೆ ಮಾಡಲು 306.64 ಕೋಟಿ ರೂಪಾಯಿ ಹೆಚ್ಚುವರಿ ಖರ್ಚು ಪ್ರತಿವರ್ಷ ಕೇರಳ ಸರಕಾರಕ್ಕೆ ತಗಲುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಸಕ್ಕರೆ ಮಾತ್ರವಲ್ಲ ಕಡಿತಗೊಳಿಸಿದ ಸೀಮೆ ಎಣ್ಣೆಯನ್ನು ಕೂಡಾ ಹೆಚ್ಚಿಸುವುದಿಲ್ಲ ಎಂದು ಕೇಂದ್ರ ಸಚಿವರು ಕೇರಳ ಸರಕಾರಕ್ಕೆ ತಿಳಿಸಿದ್ದಾರೆ. ಆದರೆ ಕೇರಳದ ವಿಶೇಷ ಪರಿಸ್ಥಿತಿಯನ್ನು ಪರಿಗಣಿಸಿ ಸೀಮೆ ಎಣ್ಣೆ ಪ್ರಮಾಣ ಹೆಚ್ಚಿಸಬೇಕೆಂದು ಕೇಂದ್ರಸರಕಾರವನ್ನು ವಿನಂತಿಸಲು ಕೇರಳ ಸರಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News