ಕರಾವಳಿಯಲ್ಲಿ ಡ್ರಗ್ಸ್ ಮಾಫಿಯಾಕ್ಕೆ ಕಡಿವಾಣ ಅಗತ್ಯ : ನಾಣಿಯಪ್ಪ
ಮೂಡುಬಿದಿರೆ, ಫೆ.19: ಅತೀ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಕರಾವಳಿ ಭಾಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆಯು ಅಧಿಕಗೊಂಡಿದ್ದು, ಈಗ ಇಲ್ಲಿ ಡ್ರಗ್ಸ್ ಹಾವಳಿ ಮಿತಿಮೀರುತ್ತಿದೆ. ಪೋಷಕರು ವ್ಯವಹಾರಿಕ ಒತ್ತಡದಲ್ಲಿ ಮಕ್ಕಳ ಚಟುವಟಿಕೆಗಳ ಬಗ್ಗೆ ನಿಗಾ ವಹಿಸದಿರುವುದರಿಂದ ಮಕ್ಕಳು ಹಾದಿ ತಪ್ಪುತ್ತಿದ್ದಾರೆ. ಡ್ರಗ್ಸ್ ಹಾವಳಿಯನ್ನು ತಡೆಗಟ್ಟಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಕಮಿಷನರ್ ನಾಣಿಯಪ್ಪ ಹೇಳಿದರು.
ಇಲ್ಲಿನ ಒಂಟಿಕಟ್ಟೆಯಲ್ಲಿರುವ ಸಂಜೀವ ಶೆಟ್ಟಿ ಮಲ್ಟಿಪರ್ಪಸ್ ಹಾಲ್‌ನಲ್ಲಿ ಶನಿವಾರ ನಡೆದ ಲಯನ್ಸ್ ಕ್ಲಬ್‌ನ ಪ್ರಾಂತೀಯ ಸಮ್ಮೇಳನ ಪ್ರಜ್ವಲದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಇಂದು ವೃದ್ಧರನ್ನು ಯುವಜನತೆ ಕಡೆಗಣಿಸುತ್ತಿದ್ದು ವೃದ್ಧರು ಅತಂತ್ರ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಲಯನ್ಸ್ ಕ್ಲಬ್‌ನಂತಹ ಸಂಘಟನೆಗಳು ವೃದ್ಧಾಶ್ರಮಕ್ಕೆ ಆದ್ಯತೆ ನೀಡಬೇಕು. ಅಂತರ್ಜಲ ಹೆಚ್ಚಿಸುವ ಯೋಜನೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅದಾನಿ ಯು.ಪಿ.ಸಿ.ಎಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಶೋರ್ ಆಳ್ವ ಮಾತನಾಡಿ ಲಯನ್ಸ್ ಸಂಸ್ಥೆಯ ಮೂಲಕ ನಾವು ಸಾಮಾಜಿಕ ಋಣವನ್ನು ತೀರಿಸಬಹುದು. ನಾಯಕತ್ವ ಗುಣಗಳನ್ನು ಬೆಳೆಸಲು ಇದು ಪೂರಕವಾಗಿದೆ. ಲಯನ್ಸ್ ಕೈಗೊಳ್ಳುವ ಯಾವುದೇ ಶಾಶ್ವತ ಯೋಜನೆಗಳಿಗೆ ಕಂಪೆನಿಯಿಂದ ಪ್ರೋತ್ಸಾಹ ನೀಡುವುದಾಗಿ ಹೇಳಿದರು.
ಶಾಸಕ ಕೆ. ಅಭಯಚಂದ್ರ ಜೈನ್, ಲಯನ್ಸ್ ಜಿಲ್ಲಾ ರಾಜ್ಯಪಾಲ ಅರುಣ್ ಶೆಟ್ಟಿ ಮಾತನಾಡಿ ಶುಭ ಕೋರಿದರು. ಪ್ರಾಂತ್ಯ ಸಮ್ಮೇಳನದ ಅಂಗವಾಗಿ ವಿನೋದ್ ಕುಮಾರ್ ಸಂಪಾದಕತ್ವದಲ್ಲಿ ಹೊರ ತಂದ 'ಬೆಳಕು' ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಇದೇ ಸಂದರ್ಭದಲ್ಲಿ ವಿಕಲಚೇತನ ಉದ್ಯಮಿ ಗಣೇಶ್ ಕಾಮತ್ ಹಾಗೂ ಯುವ ಸಾಧಕಿ ಪಂಚಮಿ ಮಾರೂರು ಅವರನ್ನು ಸನ್ಮಾನಿಸಲಾಯಿತು.
ಲಯನ್ಸ್ ಪ್ರಾಂತ್ಯದ ಪ್ರಥಮ ಮಹಿಳೆ ಸುಪ್ರಭ ಸಮ್ಮೇಳನವನ್ನು ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಪ್ರಾಂತೀಯ ಅಧ್ಯಕ್ಷ ಪ್ರಮಥ್ ಕುಮಾರ್ ತಮ್ಮ ವ್ಯಾಪ್ತಿಯ ಲಯನ್ಸ್ ಕ್ಲಬ್‌ಗಳ ವಾರ್ಷಿಕ ಚಟುವಟಿಕೆಗಳನ್ನು ವಿವರಿಸಿದರು.
ವೇದಿಕೆಯಲ್ಲಿ ವಲಯಾಧ್ಯಕ್ಷ ಆ್ಯಂಡ್ರೂ ಡಿಸೋಜ, ರಾಜು ಶೆಟ್ಟಿ, ಸಮ್ಮೆಳನ ಸಮಿತಿಯ ಅಧ್ಯಕ್ಷ ಶ್ರೀಪತಿ ಭಟ್, ಗೌರವಾಧ್ಯಕ್ಷ ತಿಮ್ಮಯ್ಯ ಶೆಟ್ಟಿ, ಕಾರ್ಯದರ್ಶಿ ಶಿವಪ್ರಸಾದ್ ಹೆಗ್ಡೆ, ಕೋಶಾಧಿಕಾರಿ ಮುನ್ನಾ ರಾವ್, ಮೂಡುಬಿದಿರೆ ಲಯನ್ಸ್ ಕ್ಲಬ್ ಅಧ್ಯಕ್ಷೆ ರುಕ್ಕಯ್ಯ ಪೂಜಾರಿ ಹಾಗೂ ವಿವಿಧ ಲಯನ್ಸ್ ಕ್ಲಬ್‌ಗಳ ಅಧ್ಯಕ್ಷರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಜಿತ್ ಕುಮಾರ್ ಕೊಕ್ರಾಡಿ, ಧರಣೇಂದ್ರ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಶಿವಪ್ರಸಾದ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.