ಛತ್ರಪತಿ ಶಿವಾಜಿ ದೇಶದ ಧೈರ್ಯಶಾಲಿ ಸಮುದಾಯದ ಪ್ರತೀಕ: ಬಿ.ರಮಾನಾಥ ರೈ

Update: 2017-02-19 13:31 GMT

ಮಂಗಳೂರು,ಫೆ.19: ಛತ್ರಪತಿ ಶಿವಾಜಿ ಮಹಾರಾಜ ತನ್ನ ಕಾಲ ಘಟ್ಟದಲ್ಲಿ ತನ್ನ ಸಾಮ್ರಾಜ್ಯದ ರಕ್ಷಣೆಗಾಗಿ ಶತ್ರು ರಾಜರ ವಿರುದ್ಧ ಹೋರಾಡಿ ರಾಜನ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದ ಧೈರ್ಯಶಾಲಿ ಎಂದು ಪರಿಗಣಿಸಬೇಕು ಹೊರತು ಧರ್ಮಗಳ ನಡುವಿನ ರಾಜಕಾರಣದ ನೆಲೆಯಲ್ಲಿ ಪರಿಗಣಿಸಬಾರದು. ಆಗ ನಾವು ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ.ಭಾರತದ ಸೇನೆಯಲ್ಲಿ ಮರಾಠ ರೆಜಿಮೆಂಟ್ ಈ ದೇಶವನ್ನು ಕಾಯುವ ಧೈರ್ಯಶಾಲಿ ಯೋಧರ ಪಡೆಯಾಗಿದೆ ಎಂದು ರಮಾನಾಥ ರೈ ತಿಳಿಸಿದರು.

ನಗರದ ಜಪ್ಪಿನಮೊಗರು ಬಳಿ ಆರ್ಯ ಮರಾಠ ಸಂಘದ ವತಿಯಿಂದ ನಿರ್ಮಾಣವಾದ ಆರ್ಯ ಮರಾಠ ಭವನದ ಲೋಕಾರ್ಪಣೆ ಸಮಾರಂಭದಲ್ಲಿ ಅವರು ರವಿವಾರ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ಶಿವಾಜಿಯನ್ನು ಈ ದೇಶದಲ್ಲಿರುವ ಒಂದು ಸಮುದಾಯದ ವಿರೋಧಿ ಎಂದು ನೋಡುವುದು ಸರಿಯಲ್ಲಿ ಶಿವಾಜಿ ಮಹಾರಾಜರ ಕಾಲದಲ್ಲಿ ಅವರ ಆಳ್ವಿಕೆ ಒಳಪಟ್ಟ ಎಲ್ಲರ ಬಗ್ಗೆಯೂ ರಕ್ಷಣೆಗಾಗಿ ಹೋರಾಡಿದ ರಾಜ ಮತ್ತು ತನ್ನ ವಿರುದ್ಧ ಇದ್ದ ಎಲ್ಲಾ ರಾಜರ ವಿರುದ್ಧ ಹೋರಾಟ ಮಾಡಿರುವುದು ಐತಿಹಾಸಿಕ ಸತ್ಯ.ಇತಿಹಾಸದ ಈ ಸತ್ಯವನ್ನು ಮರೆಮಾಚಿ ಶಿವಾಜಿಯನ್ನು ಒಂದು ಸಮುದಾಯದ ವಿರುದ್ಧ ಎತ್ತಿಕಟ್ಟು ಕೆಲಸ ಮಾಡುವುದು ಸರಿಯಲ್ಲ.ಶಿವಾಜಿಯ ಧೈರ್ಯ,ಶೌರ್ಯ,ಸಾಹಸಮಯ ಬದುಕು ನಮಗೆ ಆದರ್ಶವಾಗಬೇಕು ಭಾರತದ ಸೇನೆಯಲ್ಲಿ ರುವ ಮರಾಠ ರೆಜಿಮೆಂಟ್ ಇಂತಹ ಗೌರವದ ಪ್ರತೀಕವಾಗಿದೆ.ದೇಶ ರಕ್ಷಣೆಯ ಹೆಸರಿನಲ್ಲಿ ನಾವು ಶಿವಾಜಿಯ ಧೈರ್ಯ ಮನೋಭಾವದೊಂದಿಗೆ ಜಾತಿ,ಮತ ಭೇದ ಮರೆತು ಒಂದಾಗ ಬೇಕಾಗಿದೆ ಎಂದು ರಮಾನಾಥ ರೈ ತಿಳಿಸಿದರು.

ಮರಾಠ ಸಮುದಾಯ ಭವನಕ್ಕೆ ಸರಕಾರದಿಂದ 70ಲಕ್ಷ ಅನುದಾನ:

ಹಿಂದುಳಿದ ಸಮಾಜ ಮತ್ತು ಸಣ್ಣ ಪ್ರಮಾಣದ ಜನಸಂಖ್ಯೆಯನ್ನು ಹೊಂದಿರುವ ಆರ್ಯಯಾನೆ ಮರಾಠ ಸಮಾಜದ ಸಮುದಾಯ ಭವನ ಜಪ್ಪಿನ ಮೊಗರುವಿನಲ್ಲಿ ನಿರ್ಮಾಣ ಮಾಡಲು ಸರಕಾರದ ವತಿಯಿಂದ 70 ಲಕ್ಷ ಅನುದಾನ ನೀಡಲಾಗಿದೆ ಎಂದು ರಮಾನಾಥ ರೈ ತಿಳಿಸಿದರು.

ಸಮಾರಂಭದಲ್ಲಿ ಮುಖ್ಯ ಸಚೇತಕ ಐವನ್ ಡಿ ಸೋಜ,ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ,ಮಾಜಿ ಶಾಸಕ ಮೋನಪ್ಪ ಭಂಡಾರಿ,ಮನಪಾ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ,ಸುರೇಂದ್ರ ಹಾಗೂ ಆರ್ಯ ಮರಾಠ ಸಂಘದ ಅಧ್ಯಕ್ಷ ದೇವೋಜಿ ರಾವ್,ಪದಾಧಿಕಾರಿಗಳಾದ ಯತೀಂದ್ರ ಬಹುಮಾನ್,ಯತೀಶ್ ಕುಮಾರ್ ಪಾಟೀಲ್,ಶ್ರೀಧರ ರಾವ್ ಬಹುಮಾನ್ ಮತ್ತು ಉದ್ಯಮಿ ಗಣೇಶ್ ಶೆಟ್ಟಿ ಗುಡ್ಡೆ ಗುತ್ತು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News