ಮಂಗಳೂರು ವಿವಿಯಲ್ಲಿ ಹಳೆ ವಿದ್ಯಾರ್ಥಿಗಳ ‘ಸಂಗಮ'
ಕೊಣಾಜೆ, ಫೆ.19: ಮಂಗಳೂರು ವಿವಿಯ ಮಂಗಳಾ ಅಲ್ಯುಮಿನಿ ಅಸೋಸಿಯೇಶನ್ ವತಿಯಿಂದ ವಿವಿಯ ಮಂಗಳಾ ಸಭಾಂಗಣದಲ್ಲಿ ವಿವಿಯ ಹಳೆ ವಿದ್ಯಾರ್ಥಿಗಳ ಪ್ರಥಮ ಸಮಾವೇಶ ‘ಸಂಗಮ' ಕಾರ್ಯಕ್ರಮ ರವಿವಾರ ಮಂಗಳಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ವಿವಿಯಲ್ಲಿ ವಿದ್ಯಾರ್ಜನೆಗೈದು ಈಗ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಹಳೆ ವಿದ್ಯಾರ್ಥಿಗಳು ಒಟ್ಟು ಸೇರಿ ತಮ್ಮ ಸಹಪಾಠಿಗಳೊಂದಿಗೆ ನೆನಪುಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕ್ಯಾಲಿಕಟ್ ಮತ್ತು ಕಣ್ಣೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಎಂ.ಅಬ್ದುಲ್ ರಹಿಮಾನ್ ಅವರು, ಯಾವುದೇ ಒಂದು ಶಿಕ್ಷಣ ಸಂಸ್ಥೆಯ ಅಭಿವೃದ್ಧಿಯಲ್ಲಿ ಅಥವಾ ಬೆಳವಣಿಗೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಪಾತ್ರವು ಮಹತ್ವದ್ದಾಗಿದೆ. ಕೊಣಾಜೆಯಲ್ಲಿ ವಿವಿ ಆರಂಭಗೊಳ್ಳಲು ಸೂರ್ಯನಾರಾಯಣ ಅಡಿಗ, ಯು.ಟಿ.ಫರೀದ್, ಪ್ರೊ. ಜವರೇಗೌಡ, ಪರಮೇಶ್ವರ ಭಟ್ಟ ಅವರ ಪರಿಶ್ರಮ ಅಪಾರವಾದುದು ಎಂದು ಹೇಳಿದರು.
ಮಂಗಳೂರು ವಿವಿ ಕುಲಸಚಿವ ಪ್ರೊ.ಕೆ.ಎಂ.ಲೋಕೇಶ್ ಅವರು ಮಾತನಾಡಿ, ಮಂಗಳೂರು ವಿವಿಯು ಗುಣಮಟ್ಟದ ಶಿಕ್ಷಣಕ್ಕೆ ಇಡೀ ದೇಶದಲ್ಲಿ ಪ್ರಸಿದ್ದಿಯಾಗಿದೆ. ಮೂಲಭೂತ ಸೌಲಭ್ಯಗಳು ವಿಸ್ತಾರಗೊಂಡರೆ ಇನ್ನಷ್ಟು ಶೈಕ್ಷಣಿಕ ಯೋಜನೆಗಳನ್ನು ರೂಪಿಸಲು ಸನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಹಳೆ ವಿದ್ಯಾರ್ಥಿ ಸಂಘವು ಕೂಡಾ ವಿವಿ ಅಭಿವೃದ್ಧಿಯಲ್ಲಿ ಕೈ ಜೋಡಿಸಿದರೆ ಮಂಗಳೂರು ವಿವಿ ಇನ್ನಷ್ಟು ಬೆಳೆಯಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹಳೆ ವಿದ್ಯಾರ್ಥಿ ಅನಂತ ಕೃಷ್ಣ ಅವರು, ಒಬ್ಬ ವ್ಯಕ್ತಿಯು ಜೀವನದಲ್ಲಿ ಮಹೋನ್ನತ ಸಾಧನೆ ಮಾಡಬಹುದು, ಅಥವಾ ಉನ್ನತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರಬಹುದು. ಆದರೆ ಇಂತಹ ಸಾಧನೆಯ ಹಿಂದೆ ತಾವು ಕಲಿತ ಶಿಕ್ಷಣ ಸಂಸ್ಥೆಯ ಪಾತ್ರ ಪ್ರಮುಖವಾದುದು. ನಾವಿಲ್ಲಿ ಹಳೆವಿದ್ಯಾಥಿಗಳೆಲ್ಲ ಇಂದು(ಮಂಗಳಾ ಅಲ್ಯೂಮಿನಿ ಅಸೋಸಿಯೇಶನ್) ‘ಮಾ' ಹೆಸರಿನಲ್ಲಿ ಒಟ್ಟು ಸೇರಿದ್ದೇವೆ. ಮಾ ಎಂದರೆ ತಾಯಿ ಎಂದರ್ಥ. ಆದ್ದರಿಂದ ಮಾತೃ ಸಂಸ್ಥೆಯ ಋಣವನ್ನು ನಾವು ತೀರಿಸಬೇಕಾದರೆ ನಾವು ಕೂಡಾ ಈ ಸಂಘಟನೆಯಲ್ಲಿ ತೊಡಗಿಸಿಕೊಂಡು ವಿಶ್ವವಿದ್ಯಾಲಯದ ಅಭಿವೃದ್ದಿಯಲ್ಲಿ ತೊಡಗಿಸಿಕೊಳ್ಳೋಣ ಎಂದರು.
ಕಾರ್ಯಕ್ರಮದಲ್ಲಿ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ದಿನೇಶ್ ಕುಮಾರ್ ಆಳ್ವ ಅವರು ಸ್ವಾಗತಿಸಿದರು. ಮದುಸೂದನ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘಟನೆಯ ಕಾರ್ಯ ಚಟುವಟಿಕೆಯ ಬಗ್ಗೆ ವೇಣುಶರ್ಮಾ ಅವರು ಮಾತನಾಡಿದರು. ಪ್ರಾಧ್ಯಾಪಕ ಪ್ರೊ.ಧರ್ಮ ಅತಿಥಿಗಳ ಪರಿಚಯ ಮಾಡಿದರು. ಚಂದ್ರಹಾಸ್ ವಂದಿಸಿದರು. ಕೋಶಾಧಿಕಾರಿ ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಹಳೆವಿದ್ಯಾರ್ಥಿ ಹಾಗೂ ಮೂಡಿಗೆರೆ ಶಾಸಕರೂ ಆಗಿರುವ ನಿಂಗಯ್ಯ, ಸರಕಾರಿ ಇಲಾಖೆಯೊಂದರ ಅಧಿಕಾರಿ ವಿಜಯಪ್ರಕಾಶ್, ಪ್ರೊ.ನರಹರಿ, ರಮ್ಯಾ ಸೇರಿದಂತೆ ವಿವಿದ ಪ್ರಾಧ್ಯಾಪಕರು, ಅಧಿಕಾರಿಗಳು ತಾವು ಕ್ಯಾಂಪಸ್‌ನಲ್ಲಿ ಕಳೆದ ಅನುಭವವನ್ನು ವೇದಿಕೆಯಲ್ಲಿಹಂಚಿಕೊಂಡರು. ಕಾರ್ಯಕ್ರಮದಲ್ಲಿ 600ಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.