×
Ad

ಭಟ್ಕಳ: ದಡಾರ-ರುಬೆಲ್ಲಾ ವ್ಯಾಕ್ಸಿನ್‌ಗೆ ಪ್ರತಿರೋಧ; ಶಿಕ್ಷಕ, ವೈದ್ಯರ ಹಲ್ಲೆಗೆ ಮುಂದಾದ ಪಾಲಕರು

Update: 2017-02-19 19:19 IST

ಭಟ್ಕಳ, ಫೆ.19: ಇಲ್ಲಿನ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯೊಂದರಲ್ಲಿ ಸರಕಾರದ ಯೋಜನೆಯಾದ ದಡಾರ, ರುಬೆಲ್ಲಾ ಲಸಿಕಾ ಅಭಿಯಾನದಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡುತ್ತಿರುವ ಸಂದರ್ಭದಲ್ಲಿ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ ಪಾಲಕರು, ವೈದ್ಯರು ಹಾಗೂ ಶಾಲಾ ಶಿಕ್ಷಕರ ಮೇಲೆ ಹಲ್ಲೆಗೆ ಮುಂದಾಗಿರುವ ಘಟನೆ ರವಿವಾರ ಜರಗಿದೆ.

ತಾಲೂಕಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಮ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರವಿವಾರ ವಿದ್ಯಾರ್ಥಿಗಳಿಗೆ ಲಸಿಕೆ ನೀಡುತ್ತಿದ್ದು, ತಮ್ಮ ಅನುಮತಿಯಿಲ್ಲದೆ ಲಸಿಕೆಯನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದ ಐವತ್ತಕ್ಕೂ ಹೆಚ್ಚು ಪಾಲಕರು ಏಕಾಏಕಿ ಶಾಲೆಗೆ ನುಗ್ಗಿ ಅಲ್ಲಿನ ಆಡಳಿತ ಮಂಡಳಿ ಕಾರ್ಯದರ್ಶಿ, ಶಿಕ್ಷಕರು ಹಾಗೂ ವೈದ್ಯರನ್ನು ತರಾಟಗೆ ತೆಗೆದುಕೊಂಡಿದ್ದು, ಮಹಿಳಾ ವೈದ್ಯೆಯೊಬ್ಬರು ಹಾಗೂ ಇಬ್ಬರು ಶಿಕ್ಷಕರ ಮೇಲೆ ಹಲ್ಲೆಗೂ ಮುಂದಾಗಿದ್ದಾರೆ.

ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಮನಗಂಡ ಶಾಲೆಯ ಮುಖ್ಯಸ್ಥರು ತಹಶೀಲ್ದಾರರಿಗೆ ವಿಷಯ ತಿಳಿಸಿದ್ದು, ಕೂಡಲೆ ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ವಿ.ಎನ್. ಬಾಡ್ಕರ್ ಪಾಲಕರ ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ, ಕೇಳದ ಪಾಲಕರು ತಹಸಿಲ್ದಾರರ ವಿರುದ್ಧವೇ ತಿರುಗಿಬಿದ್ದು ತಹಶೀಲ್ದಾರರೊಂದಿಗೆ ವಾಗ್ವಾದ ನಡೆಸಿದರು.

ತಹಶೀಲ್ದಾರರು ಇದು ಸರಕಾರದ ಅಭಿಯಾನ ಮಕ್ಕಳ ಮುಂದಿನ ಭವಿಷ್ಯವನ್ನು ಮುಂದಿಟ್ಟುಕೊಂಡು ರೂಪಿಸಲಾಗಿದೆ. ದಡಾರ ಹಾಗೂ ರುಬೆಲ್ಲಾ ರೋಗಗಳು ತಡೆಯಲು ಯೋಜನೆ ಹಮ್ಮಿಕೊಂಡಿದ್ದು,  ಪೋಷಕರಲ್ಲಿನ ತಪ್ಪು ತಿಳುವಳಿಯಿಂದಾಗಿ ಈ ಪ್ರತಿರೋಧ ನಡೆಯುತ್ತಿದ್ದು, ಪಾಲಕರ ಮನವೊಲಿಸಲಾಗುವುದು, ಅಲ್ಲದೇ ಈ ಲಸಿಕೆ ಹಾಕುವುದು ಪ್ರತಿಯೊಂದು ವಿದ್ಯಾರ್ಥಿಗೆ ಕಡ್ಡಾಯವಾಗಿದ ಎಂದರು.

ಯಾವುದಾದರೂ ಆರೋಗ್ಯ ಸಮಸ್ಯೆ ಇರುವ ವಿದ್ಯಾರ್ಥಿಗಳನ್ನು ಹೊರತು ಪಡಿಸಿ ಎಲ್ಲ ವಿದ್ಯಾರ್ಥಿಗಳಗೆ ಲಸಿಕೆಯನ್ನು ನೀಡಲಾಗುವುದು. ಲಸಿಕೆ ನೀಡುತ್ತಿರುವ ಶಾಲಾ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಯಾವುದೇ ರೀತಿಯ ತೊಂದರೆ ನೀಡಿದ್ದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಜರಗಿಸಲಾಗುವುದು. ಲಸಿಕಾ ಅಭಿಯಾನದ ವಿರುದ್ಧ ವಾಟ್ಸಪ್ ಸಂದೇಶ ಕಳುಹಿಸುತ್ತಿರುವ ಮೊಬೈಲ್ ಸಂಖ್ಯೆಗಳ ಹಾಗೂ ಗ್ರೂಪ್‌ಗಳ ಮೇಲೆ ಪೊಲೀಸರು ನಿಗಾವಹಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪುರಸಭೆ ಅಧ್ಯಕ್ಷ ಮಟ್ಟಾ ಸಾದಿಕ್, ಇಮ್ತಿಯಾರ್ ಉದ್ಯಾವರ್, ನಿಸಾರ್ ರುಕ್ನುದ್ದೀನ್, ತಂಝೀಮ್ ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮತ್ತಿತರರು ಪಾಲಕರನ್ನು ಸಮಧಾನಪಡಿಸಿ ಅವರಿಗೆ ತಿಳಿ ಹೇಳಿದರು. ಪಾಲಕರು ಯಾರ ಮಾತನ್ನು ಕೇಳದೇ ಇದ್ದಾಗ ಅನಿವಾರ್ಯವಾಗಿ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಲಾಯಿತು ಎಂದು ಶಾಲಾ ಮೂಲಗಳು ತಿಳಿಸಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News