ಹೊಸದಿಲ್ಲಿ ರೈಲ್ವೆ ನಿಲ್ದಾಣದಲ್ಲಿ ಶಹಾಬುದ್ದೀನ್‌ಗೆ ಅದ್ದೂರಿ ಸ್ವಾಗತ!
ಹೊಸದಿಲ್ಲಿ,ಫೆ.19: ಬಿಹಾರದ ಸಿವಾನ್ ಜೈಲಿನಿಂದ ಇಂದು ಬೆಳಿಗ್ಗೆ ಬಿಗು ಭದ್ರತೆಯಲ್ಲಿ ದಿಲ್ಲಿಗೆ ಕರೆತರಲಾದ ಕೊಲೆ, ಕೊಲೆಯತ್ನ ಇತ್ಯಾದಿ ಕ್ರಿಮಿನಲ್ ಪ್ರಕರಣಗಳ ಸರದಾರ, ಮಾಜಿ ಆರ್‌ಜೆಡಿ ಸಂಸದ ಮುಹಮ್ಮದ್ ಶಹಾಬುದ್ದೀನ್ ಹೊಸದಿಲ್ಲಿ ರೈಲು ನಿಲ್ದಾಣವನ್ನು ತಲುಪುತ್ತಿದ್ದಂತೆ ನೂಕುನುಗ್ಗಲಿನಂತಹ ಸ್ಥಿತಿ ನಿರ್ಮಾಣಗೊಂಡಿತ್ತು.
ಶಹಾಬುದ್ದೀನ್ ಸಿವಾನ್ ಜೈಲಿನಲ್ಲಿಯೇ ಮುಂದುವರಿದರೆ ಸಾಕ್ಷನಾಶದ ಆತಂಕವಿದೆ ಎಂದು ದೂರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ಸರ್ವೋಚ್ಚ ನ್ಯಾಯಾಲಯವು ಮಾಜಿ ಸಂಸದನನ್ನು ದಿಲ್ಲಿಯ ತಿಹಾರ ಜೈಲಿಗೆ ಸ್ಥಳಾಂತರಿಸುವಂತೆ ಮತ್ತು ವೀಡಿಯೊ ಕಾನ್‌ಫರೆನ್ಸ್ ಮೂಲಕ ವಿಚಾರಣೆ ನಡೆಸುವಂತೆ ಆದೇಶಿಸಿತ್ತು.
ರೈಲ್ವೆ ನಿಲ್ದಾಣದ 16ನೇ ನಂ.ಪ್ಲಾಟ್‌ಫಾರ್ಮ್‌ನಲ್ಲಿ ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಶಹಾಬುದ್ದೀನ್ ಬೆಂಬಲಿಗರು ಸ್ವಾಗತವನ್ನು ಕೋರುವ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. ಶಹಾಬುದ್ದೀನ್ ಪರವಾಗಿ ಘೋಷಣೆಗಳನ್ನು ಕೂಗಿದ ಅವರು ಬಿಹಾರದ ಮುಖ್ಯಮಂತ್ರಿ ನಿತೀಶ ಕುಮಾರ್‌ಗೆ ಧಿಕ್ಕಾರವನ್ನೂ ಕೂಗಿದರು.
ಬಿಹಾರದ ‘ಸ್ಟ್ರಾಂಗ್‌ಮನ್ ’ ಶಹಾಬುದ್ದೀನ್ ರೈಲ್ವೇ ಬೋಗಿಯಿಂದ ಹೊರಬರುತ್ತಿದ್ದಂತೆ ಜನರು ‘‘ದೇಖೋ ದೇಖೋ ಕೌನ್ ಆಯಾ,ಶೇರ್ ಆಯಾ ಶೇರ್ ಆಯಾ’ ಎಂಬ ಘೋಷಣೆಗಳನ್ನೂ ಮೊಳಗಿಸಿದರು.
‘‘ಶಹಾಬುದ್ದೀನ್ ವಿರುದ್ಧ ಪಿತೂರಿ ನಡೆದಿದೆ. ಅವರನ್ನು ನ್ಯಾಯಯುತವಾಗಿ ನಡೆಸಿಕೊಳ್ಳುತ್ತಿಲ್ಲ ’’ಎಂದು ಬೆಂಬಲಿಗನೋರ್ವ ಆಕ್ರೋಶ ವ್ಯಕ್ತಪಡಿಸಿದ.