ಬೋರ್‌ವೆಲ್ ತೋಡಲು ಅವಕಾಶ: ಅಭಯಚಂದ್ರ ತಾಕೀತು
ಮೂಡುಬಿದಿರೆ, ಫೆ.19: ಖಾಸಗಿಯವರಿಗೆ ಬೋರ್‌ವೆಲ್ ತೋಡಲು ಈಗ ನಿಯಮಾನುಸಾರ ಅವಕಾಶ ಕಲ್ಪಿಸಲಾಗಿದ್ದು ಈ ಕುರಿತ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು. ಉದ್ಯೋಗಾವಕಾಶ ಹೆಚ್ಚಿಸಲು ಶಾಲೆಗಳ ಮೈದಾನ ದುರಸ್ತಿ, ವಿಸ್ತರಣೆ ಮೊದಲಾದ ಕಾಮಗಾರಿಗಳನ್ನು ನಡೆಸಲು ಯೋಜನೆ ಹಾಕಿಕೊಳ್ಳಬೇಕು. ಈ ಎಲ್ಲ ಕಾರ್ಯಗಳಲ್ಲಿ ಪಂ. ಅಭಿವೃದ್ದಿ ಅಧಿಕಾರಿಗಳು ಮುತುವರ್ಜಿಯಿಂದ ಕೆಲಸ ಮಾಡಬೇಕುಎಂದು ಶಾಸಕ ಅಭಯಚಂದ್ರ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮಂಗಳೂರು ಮತ್ತು ಬಂಟ್ವಾಳ ತಾಲೂಕುಗಳನ್ನು ಸರಕಾರ ಬರ ಪೀಡಿತ ಪ್ರದೇಶಗಳೆಂದು ಸಾರಿರುವ ಹಿನ್ನೆಲೆಯಲ್ಲಿ ಮೂಡಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರು ಪೂರೈಕೆ ಹಾಗೂ ಉದ್ಯೋಗ ಅವಕಾಶ ಕಲ್ಪಿಸುವ ದಿಸೆಯಲ್ಲಿ ಮೂಡುಬಿದಿರೆ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ನಡೆದ ವಿಧಾನಸಭಾ ಕ್ಷೇತ್ರ ವಿಪತ್ತು ನಿರ್ವಹಣಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ಸೂಚನೆ ನೀಡಿದರು.
ವಿಶೇಷವಾಗಿ ನಿರ್ವಹಣೆ ಇಲ್ಲದೆ ಹಾಳುಬಿದ್ದಿರುವ ಕೆರೆಗಳನ್ನು ‘ಕೆರೆ ಸಂಜೀವಿನಿ' ಯೋಜನೆಯಡಿ ದುರಸ್ಥಿಗೊಳಿಸುವ ಬಗ್ಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಕ್ರಿಯಾಯೋಜನೆ ತಯಾರಿಸಿ ಕೂಡಲೇ ಸಮಿತಿಗೆ ಪ್ರಸ್ತಾವನೆ ಸಲ್ಲಿಸಬೇಕೆಂದು ತಹಶೀಲ್ದಾರರು ಸೂಚಿಸಿದರು.
ಮೂಡುಬಿದಿರೆಯಲ್ಲಿ ರೋಟರಿ ಕ್ಲಬ್ ಗುರುತಿಸಿರುವ 18 ಕೆರೆಗಳ ಪೈಕಿ ಮೊಹಲ್ಲ ಕೆರೆ ಸೇರಿದಂತೆ ಎರಡನ್ನಾದರೂ ಪುನಶ್ಚೇತನಗೊಳಿಸಲು ಯೋಜನೆ ಹಾಕಿಕೊಂಡಿರುವುದಾಗಿ ರೋಟರಿ ಕ್ಲಬ್‌ನ ಡಾ. ಮುರಳೀಕೃಷ್ಣ ತಿಳಿಸಿದರು.
ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಜಿ. ಸದಾನಂದ, ಮುಲ್ಕಿ ವಿಶೇಷ ತಹಶೀಲ್ದಾರ್ ಕಿಶೋರ್ ಕುಮಾರ್ ಕೆ., ಮುಲ್ಕಿ ಪುರಸಭಾ ಮುಖ್ಯಾಧಿಕಾರಿ ಇಂದು, ಮೂಡಬಿದಿರೆ ಪುರಸಭಾ ಮುಖ್ಯಾಧಿಕಾರಿ ಶೀನ ನಾಯ್ಕಾ, ಸಹಾಯಕ ತೋಟಗಾರಿಕಾ ಅಧಿಕಾರಿ ಸುಕುಮಾರ್ ಹೆಗ್ಡೆ, ಕ್ಷೇತ್ರ ದೈ.ಶಿ. ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ ಹಾಜರಿದ್ದರು.