×
Ad

ತಮಿಳುನಾಡು ಸರಕಾರ ಕ್ರಿಮಿನಲ್‌ಗಳ ಕೂಟದಂತಿದೆ: ಕಮಲಹಾಸನ್

Update: 2017-02-19 19:48 IST

ಚೆನ್ನೈ, ಫೆ.19: ತಮಿಳುನಾಡು ಸರಕಾರವು ‘ಕ್ರಿಮಿನಲ್‌ಗಳ ಕೂಟ’ದಂತಿದೆ ಎಂದು ಎಂದು ದಕ್ಷಿಣ ಭಾರತದ ಖ್ಯಾತ ಸಿನೆಮಾ ನಟ ಕಮಲಹಾಸನ್ ಹೇಳಿದ್ದಾರೆ.

 ಮುಖ್ಯಮಂತ್ರಿ ಪಳನಿಸ್ವಾಮಿ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದಿರಬಹುದು. ಆದರೆ ಹೀಗಾಗುತ್ತದೆ ಎಂದು ತಾನು ನಿರೀಕ್ಷಿಸಿರಲಿಲ್ಲ . ಬೀದಿಗಳಲ್ಲಿ ವ್ಯಕ್ತವಾಗುತ್ತಿರುವ ಭಾವನೆಗಳು ಮತ್ತೇನನ್ನೋ ಸೂಚಿಸುತ್ತಿವೆ ಎಂದು ಎನ್‌ಡಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು.

ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯೆಂದು ಸುಪ್ರೀಂಕೋರ್ಟ್ ತಿಳಿಸಿರುವ ಎಐಎಡಿಎಂಕೆ ಮುಖ್ಯಸ್ಥೆ ಶಶಿಕಲಾ ಮತ್ತವರ ಕುಟುಂಬವರ್ಗದವರು ಪಳನಿಸ್ವಾಮಿಯನ್ನು ಮುಖ್ಯಮಂತ್ರಿ ಎಂದು ನೇಮಿಸಿರುವ ಕಾರಣ ಇದು ‘ಕ್ರಿಮಿನಲ್‌ಗಳ ಕೂಟ’ದಂತಿದೆ ಎಂದು ಅವರು ಹೇಳಿದರು.

ಇದು ಸತ್ಯ ಮತ್ತು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲೇ ತಿಳಿಸಿದೆ. ಮಾಜಿ ಮುಖ್ಯಮಂತ್ರಿ (ಜಯಲಲಿತಾ) ಕೂಡಾ ಆರೋಪಿ ಎಂದು ತೀರ್ಪು ನೀಡಿದೆ. ಇದೀಗ ನಮ್ಮ ವಿಧಾನಸಭೆಯನ್ನು ಸ್ವಚ್ಛಗೊಳಿಸಬೇಕಿದೆ. ಜನರಿಗೆ ಚುನಾಯಿಸುವ ಹಕ್ಕು ನೀಡಬೇಕು. ಅವರು ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸಲು ಅವಕಾಶ ನೀಡಬೇಕು ಎಂದರು.

ನಿಮಗೆ ರಾಜಕೀಯಕ್ಕೆ ಸೇರಲು ಅರ್ಹತೆ ಇಲ್ಲ ಎಂದು ಭಾವಿಸುತ್ತಿದ್ದೀರಾ ಎಂಬ ಪ್ರಶ್ನೆಗೆ, ನನಗೆ ಕೋಪ ಹೆಚ್ಚು. ನಿಮಗೆ ಕೋಪಿಷ್ಟ ರಾಜಕಾರಣಿಯ ಅಗತ್ಯವಿಲ್ಲ. ರಾಜಕಾರಣಿಗಳಿಗೆ ಸಮತೋಲನದ ಮನಸ್ಥಿತಿ ಇರಬೇಕು. ಈ ಸಂದರ್ಭ ನಾನು ಮತ್ತು ರಾಜ್ಯದ ಜನರು ಕೋಪಾವಿಷ್ಟರಾಗಿದ್ದೇವೆ ಎಂದುತ್ತರಿಸಿದರು.

  ಈ ಮಧ್ಯೆ, ಎಐಎಡಿಎಂಕೆಯ ಅಧಿಕೃತ ಟ್ವಿಟರ್‌ನಲ್ಲಿ- ತಮಿಳುನಾಡಿನ ರಕ್ಷಣೆಯಾಗಿದೆ ಎಂದು ಬರೆದಿರುವ ಬಗ್ಗೆ ಅರವಿಂದ ಸ್ವಾಮಿ, ಸಿದ್ಧಾರ್ಥ್ ಸೇರಿದಂತೆ ಪ್ರಮುಖ ತಮಿಳು ನಟರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News