ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್: ಕರ್ನಾಟಕ ತಂಡ ಕ್ವಾರ್ಟರ್ ಫೈನಲ್‌ಗೆ
ಮೂಡುಬಿದಿರೆ, ಫೆ.19: ಎಂ.ಕೆ. ಅನಂತರಾಜ್ ಸಂಸ್ಮರಣ 62ನೆ ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮೈದಾನದಲ್ಲಿ ನಡೆಯುತ್ತಿದ್ದು, ಪಂದ್ಯಾಟದ ಮೊದಲ ದಿನ ಕರ್ನಾಟಕದ ಮಹಿಳಾ ತಂಡವು ಎರಡು ಪಂದ್ಯಗಳಲ್ಲಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಹಂತಕ್ಕೆ ತಲುಪಿದೆ. ಪುರುಷರ ತಂಡವು ಒಂದು ಪಂದ್ಯದಲ್ಲಿ ಜಯ ಸಾಧಿಸಿದೆ.
ಮಹಿಳಾ ವಿಭಾಗದಲ್ಲಿ ಕರ್ನಾಟಕ ತಂಡವು ದೆಹಲಿ ತಂಡವನ್ನು 35-05, 35-15 ನೇರ ಸೆಟ್‌ಗಳಿಂದ ಸೋಲಿಸಿದೆ. ಇನ್ನೊಂದು ಪಂದ್ಯದಲ್ಲಿ ಛತೀಸ್‌ಗಡ್ ತಂಡವನ್ನು ಕರ್ನಾಟಕ ಮಹಿಳಾ ತಂಡವು 35-20, 35-19 ನೇರ ಸೆಟ್‌ಗಳಲ್ಲಿ ಸೋಲಿಸಿ, ಮುಂದಿನ ಹಂತಕ್ಕೆ ಆಯ್ಕೆಯಾಗಿದೆ.
ಪುರುಷರ ವಿಭಾಗದಲ್ಲಿ ಕರ್ನಾಟಕ ತಂಡವು 31-35, 35-28,35-32 ಅಂಕಗಳೊಂದಿಗೆ ಆಂದ್ರ ಪ್ರದೇಶ ತಂಡವನ್ನು ಸೋಲಿಸಿದೆ. ಕಳೆದ ಬಾರಿಯ ರನ್ನರ್ಸ್ ಅಪ್ ತಂಡ ತೆಲಂಗಾಣದ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಅತಿಥೇಯ ಕರ್ನಾಟಕ ಪುರಷರ ತಂಡವು ಸೋಲನ್ನು ಅನುಭವಿಸಿದೆ. ಮೊದಲ ದಿನ ಪುರಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಒಟ್ಟು ನಾಲ್ಕು ಪಂದ್ಯಗಳನ್ನಾಡಿದ್ದು, ಮೂರರಲ್ಲಿ ಜಯಗಳಿಸಿದೆ.
ಕಳೆದ ಬಾರಿಯ ಚಾಂಪಿಯನ್ ತಂಡಗಳಾದ ಇಂಡಿಯನ್ ರೈಲ್ವೇಸ್ ಹಾಗೂ ತೆಲಂಗಾಣ ತಂಡಗಳು ಮೊದಲ ದಿನ ತಾವಾಡಿದ ಎರಡೂ ಪಂದ್ಯಗಳನ್ನು ಗೆದ್ದು ಸ್ಪಷ್ಟ ಮುನ್ನಡೆ ಸಾಧಿಸಿದೆ.
ಪುರಷರ ವಿಭಾಗದಲ್ಲಿ ತಮಿಳುನಾಡು, ಮೇಜರ್ ಫೋರ್ಟ್ಸ್, ವೇಸ್ಟ್ ಬೆಂಗಾಲ್, ಗುಜರಾತ್, ಛತೀಸ್‌ಗಡ್, ಚಂಡಿಗಢ್, ಬಿಹಾರ್, ಎಐಯು, ಒಡಿಸ್ಸಾ, ಕೇರಳ, ಒಡಿಸ್ಸಾ, ಡಿಎಇ, ಅಂದ್ರಪ್ರದೇಶ ತಂಡಗಳು ಹಾಗೂ ಮಹಿಳೆಯರ ವಿಭಾಗದಲ್ಲಿ ತಮಿಳುನಾಡು, ಛತೀಸ್‌ಗಡ್, ಕೇರಳ, ತೆಲಂಗಾಣ, ಒಡಿಸ್ಸಾ, ಬಿಹಾರ್, ಪುದುಚೆರಿ, ಎಐಯು, ಎನ್‌ಸಿಆರ್, ಗುಜರಾತ್, ರಾಜಸ್ಥಾನ್, ಆಂದ್ರ ಪ್ರದೇಶ, ಕೇರಳ ತಂಡಗಳು ಗೆಲುವು ಸಾಧಿಸಿವೆ.
ಸೋಮವಾರ ಪುರುಷರ ವಿಭಾಗದಲ್ಲಿ ಕರ್ನಾಟಕ ತಂಡವು ಪುದುಚೇರಿಯನ್ನು ಎದುರಿಸಲಿದೆ.