ಮಂಗಳೂರು: ಕರಾವಳಿ ಸೌಹಾರ್ದ ರ‍್ಯಾಲಿ ಬೆಂಬಲಿಸಿ ಫೆ.20ರಂದು ಬೈಕ್ ರ‍್ಯಾಲಿ
ಮಂಗಳೂರು, ಫೆ. 19: ನಗರದಲ್ಲಿ ಫೆ. 25ರಂದು ಜರುಗಲಿರುವ ಕರಾವಳಿ ಸೌಹಾರ್ದ ರ‍್ಯಾಲಿಯ ಸಂದೇಶವನ್ನು ಸಾರುವ ಅಂಗವಾಗಿ ಫೆ. 20ರಂದು ಸಂಜೆ 4 ಗಂಟೆಗೆ ಮಂಗಳೂರು ನಗರದಾದ್ಯಂತ ಸಿಪಿಎಂ ಯುವ ಕಾರ್ಯಕರ್ತರಿಂದ ಬೈಕ್ ರ‍್ಯಾಲಿ ನಡೆಯಲಿದೆ ಎಂದು ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಕೋಮು ಸೌಹಾರ್ದತೆಯ ತಾಣವಾಗಿದ್ದ ಅಭಜಿತ ದ.ಕ. ಜಿಲ್ಲೆಯಲ್ಲಿ ಕಳೆದ ಮೂರು ದಶಕಗಳಿಂದ ಸಂಘ ಪರಿವಾರ ಪ್ರೇರಿತ ಕೋಮುವಾದಿ ಶಕ್ತಿಗಳು ಕೋಮು ವಿಷಬೀಜವನ್ನು ಬಿತ್ತಿ ಅಲ್ಪಸಂಖ್ಯಾತರ ಮೇಲೆ ಅವ್ಯಾಹತ ದಾಳಿಗಳನ್ನು ನಡೆಸುವ ಮೂಲಕ ಮಂಗಳೂರನ್ನು ತನ್ನ ಪ್ರಯೋಗ ಶಾಲೆಯನ್ನಾಗಿ ಮಾಡಿದೆ. ಹುಡುಗ ಹುಡುಗಿಯರ ವಿಷಯ, ಗೋಹತ್ಯೆ, ಗೋ ಸಾಗಾಟ, ಮತಾಂತರ, ಲವ್‌ಜಿಹಾದ್ ಎಂಬಿತ್ಯಾದಿ ವಿಷಯಗಳನ್ನು ಇಲ್ಲಿಂದಲೇ ಸೃಷ್ಟಿಸಿ ಭಯಾನಕ ವಾತಾವರಣ ನಿರ್ಮಿಸುವ ಮೂಲಕ ಜಿಲ್ಲೆಯ ಸೌಹಾರ್ದ ಪರಂಪರೆಗೆ ಕೊಳ್ಳಿಯನ್ನು ಇಟ್ಟಿದೆ.
ನೈತಿಕ ಪೊಲೀಸ್‌ಗಿರಿಯ ಹೆಸರಿನಲ್ಲಿ ಪಬ್ ದಾಳಿ, ಹೋಮ್‌ಸ್ಟೇ ದಾಳಿ ನಡೆಸುವ ಮೂಲಕ ಎಳೆಯ ಪ್ರಾಯದ ಹೆಣ್ಣು ಮಕ್ಕಳ ಮೇಲೆಯೂ ದೈಹಿಕ ದಾಳಿಯನ್ನು ನಡೆಸಿದೆ. ಮತಾಂತರದ ಹೆಸರಿನಲ್ಲಿ ಚರ್ಚ್ ದಾಳಿ ನಡೆಸಿ ಕ್ರಿಶ್ಚಿಯನ್ ಸಮುದಾಯದ ಮೇಲೆಯೂ ಭೀಕರ ಹಲ್ಲೆ ನಡೆಸಿದೆ. ಒಟ್ಟಿನಲ್ಲಿ ಎಲ್ಲಾ ಜಾತಿ ಧರ್ಮದ ಜನತೆ ಕೂಡಿ ಬಾಳುವ ದ.ಕ. ಜಿಲ್ಲೆಯ ಈ ಹಿಂದಿನ ಸೌಹಾರ್ದ ಪರಂಪರೆಯನ್ನು ಮತ್ತೆ ಮರುಕಳಿಸಲು, ಹೃದಯ ಹೃದಯಗಳನ್ನು ಬೆಸೆಯಲು ಜಿಲ್ಲೆಯ ಸೌಹಾರ್ದ ಪ್ರಿಯ ಜನತೆ ಒಂದಾಗಿ ಕರಾವಳಿ ಸೌಹಾರ್ದ ರ್ಯಾಲಿಯನ್ನು ಯಶಸ್ವಿಗೊಳಿಸಬೇಕೆಂದು ಸಿಪಿಎಂ ಮನವಿ ಮಾಡಿದೆ.
ಬೈಕ್ ರ‍್ಯಾಲಿಯು ಸಂಜೆ 4 ಗಂಟೆಗೆ ದ.ಕ. ಜಿಲ್ಲಾಧಿಕಾರಿಗಳ ಕಚೇರಿಯೆದುರು ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿಮಂಡಳಿ ಸದಸ್ಯ ಕೆ.ಯಾದವ ಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ. ಬಳಿಕ ಬೈಕ್ ರ‍್ಯಾಲಿಯು ಮಂಗಳೂರು ನಗರದಾದ್ಯಂತ ಸಂಚರಿಸಿ ಸರ್ವಿಸ್ ಬಸ್ ನಿಲ್ದಾಣದ ಬಳಿ ಸಮಾರೋಪಗೊಳ್ಳಲಿದೆ.
ಸಿಪಿಎಂ ಯುವ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಸಬೇಕೆಂದು ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.