ಪ.ಮೊಸುಲ್ ಮೇಲೆ ಇರಾಕಿ ಪಡೆಗಳ ದಾಳಿ ಆರಂಭ : 3.50 ಲಕ್ಷಕ್ಕೂ ಅಧಿಕ ಮಕ್ಕಳ ಜೀವ ಅಪಾಯದಲ್ಲಿ
ಲಂಡನ್,ಫೆ.19: ಬಂಡುಕೋರರ ನಿಯಂತ್ರಣದಲ್ಲಿರುವ ಪಶ್ಚಿಮ ಮೊಸುಲ್ ಮೇಲೆ ಇರಾಕಿ ಪಡೆಗಳು ದಾಳಿಯನ್ನು ಆರಂಭಿಸಿರುವಂತೆಯೇ, , 3.50 ಲಕ್ಷಕ್ಕೂ ಅಧಿಕ ಮಂದಿ ಮಕ್ಕಳು ಈ ನಗರದಲ್ಲಿ ಸಿಕ್ಕಿಹಾಕಿಕೊಂಡಿದ್ದು, ಅವರ ಜೀವ ಅಪಾಯದಲ್ಲಿದೆಯೆಂದು ಅಂತಾರಾಷ್ಟ್ರೀಯ ಮಕ್ಕಳ ಸೇವಾಸಂಸ್ಥೆ ‘ಸೇವ್ ದಿ ಚಿಲ್ಡ್ರನ್’ ಎಚ್ಚರಿಕೆ ನೀಡಿದೆ.
‘‘ ಇರಾಕಿ ಪಡೆಗಳು ಹಾಗೂ ಅಮೆರಿಕ, ಬ್ರಿಟನ್ ಸೇರಿದಂತೆ ಅದರ ಮಿತ್ರಪಡೆಗಳು, ಈ ಮಕ್ಕಳನ್ನು ಹಾಗೂ ಅವರ ಕುಟುಂಬಗಳನ್ನು ರಕ್ಷಿಸಲು ತಮ್ಮಿಂದ ಸಾಧ್ಯವಾಗುವುದೆಲ್ಲವನ್ನೂ ಮಾಡಬೇಕಿದೆ. ಅವು ನಗರ ಒಳಭಾಗಕ್ಕೆ ನುಗ್ಗುವಾಗ ಶಾಲೆಗಳು, ಆಸ್ಪತ್ರೆಗಳು ಮತ್ತಿತರ ನಾಗರಿಕರ ಕಟ್ಟಡಗಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಲಂಡನ್ ಮೂಲದ ‘ಸೇವ್ ದಿ ಚಿಲ್ಡ್ರನ್ ’ ಸಂಸ್ಥೆಯ ನಿರ್ದೇಶಕ ವೌರಿಝಿಯೋ ಕ್ರಿವಾಲ್ಲೆರೊ ತಿಳಿಸಿದ್ದಾರೆ.
ಯುದ್ಧಗ್ರಸ್ತ ಮೊಸುಲ್‌ನಲ್ಲಿ ಐಸಿಸ್ ಉಗ್ರರಿಂದ ಹತ್ಯೆಯ ಭೀತಿ, ನೆಲಬಾಂಬ್‌ಗಳು ಹಾಗೂ ಹೊಂಚುದಾಳಿಗಳ ಅಪಾಯವನ್ನು ಹೆಜ್ಜೆಹೆಜ್ಜೆಗೆ ಎದುರಿಸುತ್ತಿರುವ ನಿವಾಸಿಗಳಿಗೆ ಆ ನಗರದಿಂದ ಪರಾರಿಯಾಗಲು ಸಾಧ್ಯವಾಗುತ್ತಿಲ್ಲವೆಂದವರು ಹೇಳಿದ್ದಾರೆ. ಅಲ್ಲಿನ ನಿವಾಸಿಗಳು ಆಹಾರ, ನೀರು ಹಾಗೂ ಔಷಧಿಗಳ ಅಭಾವವನ್ನು ಕೂಡಾ ಎದುರಿಸುತ್ತಿದ್ದಾರೆಂದು ಕ್ರಿವಾಲ್ಲೆರೊ ತಿಳಿಸಿದ್ದಾರೆ.
‘‘ಪಶ್ಚಿಮ ಮೊಸುಲ್‌ನಲ್ಲಿರುವ ಮಕ್ಕಳ ಮುಂದಿರುವ ಎರಡು ವಿಷಾದಕರ ಆಯ್ಕೆಗಳು ಹೀಗಿವೆ. ಒಂದು ವೇಳೆ ಅಲ್ಲಿ ಅವರು ಉಳಿದುಕೊಂಡಲ್ಲಿ ಬಾಂಬ್‌ಗಳು, ಗುಂಡಿನ ಚಕಮಕಿ ಹಾಗೂ ಹಸಿವನ್ನು ಎದುರಿಸಬೇಕಾಗುತ್ತದೆ. ಒಂದು ವೇಳೆ ಅಲ್ಲಿಂದ ಪರಾರಿಯಾಗಲು ಬಯಸಿದಲ್ಲಿ ಅವರು ಮರಣದಂಡನೆ ಹಾಗೂ ಹೊಂಚುದಾಳಿಯ ಅಪಾಯವನ್ನು ಎದುರಿಸಬೇಕಾಗುವುದು’’ ಎಂದು ಕ್ರಿವಾಲ್ಲೆರೊ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.
ಇರಾಕ್‌ನ ಎರಡನೆ ಅತಿ ದೊಡ್ಡ ನಗರವಾದ ಮೊಸುಲ್‌ನ್ನು ಐಸಿಸ್‌ನಿಂದ ವಿಮೋಚನೆಗೊಳಿಸಲು ಇರಾಕಿ ಪಡೆಗಳು ಕಳೆದ ನಾಲ್ಕು ತಿಂಗಳಿಂದ ಅಲ್ಲಿ ಸೇನಾಕಾರ್ಯಾಚರಣೆ ಯನ್ನು ನಡೆಸುತ್ತಿವೆ. ಮೊಸುಲ್ ನಗರದ ಮೇಲೆ ಇರಾಕ್ ಸೇನೆಯು ಅಕ್ಟೋಬರ್ 17ರಂದು ಆಕ್ರಮಣವನ್ನು ಆರಂಭಿಸಿತ್ತು. ಜನವರಿ 24ರಂದು ಅದು ಪೂರ್ವ ಮೊಸುಲ್ ಪ್ರದೇಶನ್ನು ಸಂಪೂರ್ಣ ವಿಮೋಚನೆಗೊಳಿಸಿರುವುದಾಗಿ ಘೋಷಿಸಿತ್ತು.
ಮೊಸುಲ್ ಪಶ್ಚಿಮಭಾಗದಲ್ಲಿರುವ ಬೀದಿಗಳು ಅತ್ಯಂತ ಕಿರಿದಾಗಿದ್ದು, ಸೇನಾವಾಹಗಳು ಸಂಚರಿಸುವುದು ಅಸಾಧ್ಯವಾಗಿದೆ. ಅಲ್ಲಿ ಫಿರಂಗಿ ಮತ್ತಿತರ ಸ್ಫೋಟಕ ಶಸ್ತ್ರಾಸ್ತ್ರಗಳ ದಾಳಿಯು ಅತ್ಯಂತ ಮಾರಣಾಂತಿಕವಾಗಲಿದೆ ಎಂದು ಸೇವ್ ದಿ ಚಿಲ್ಟ್ರನ್ ಆತಂಕ ವ್ಯಕ್ತಪಡಿಸಿದೆ. ಪಶ್ಚಿಮ ಮೊಸುಲ್‌ನಲ್ಲಿ 3.50 ಲಕ್ಷಕ್ಕೂ ಅಧಿಕ ಮಂದಿ 18 ವರ್ಷಕ್ಕಿಂತ ಕೆಳಗಿನ ವಯಸ್ಸಿನವರೆಂದು ಸೇವ್ ದಿ ಚಿಲ್ಟ್ರನ್ ಸಂಸ್ಥೆಯ ವಕ್ತಾರರು ಹೇಳಿದ್ದಾರೆ.