ಮ್ಯಾನ್ಮಾರ್‌ಗೆ ವಾಪಸಾಗುತ್ತಿರುವ ರೋಹಿಂಗ್ಯಗಳು
ಢಾಕಾ,ಫೆ.19: ಮ್ಯಾನ್ಮಾರ್‌ನಲ್ಲಿ ಭದ್ರತಾಪಡೆಗಳ ದಬ್ಬಾಳಿಕೆಯಿಂದ ಪಾರಾಗಲು ಬಾಂಗ್ಲಾಕ್ಕೆ ಪಲಾಯನಗೈದಿರುವ ನೂರಾರು ರೋಹಿಂಗ್ಯ ಮುಸ್ಲಿಮರು ತಾಯ್ನಿಡಿಗೆ ಹಿಂತಿರುಗಿದ್ದಾರೆಂದು, ಸಮುದಾಯದ ನಾಯಕರು ರವಿವಾರ ತಿಳಿಸಿದ್ದಾರೆ. ಆದರೆ ವಾಪಾಸಾದವರಲ್ಲಿ ಬಹುತೇಕ ಮಂದಿ ತಾಯ್ನಾಡಿನಲ್ಲಿ ಉಳಿದುಕೊಂಡಿರುವ ತಮ್ಮ ಸಮೀಪದ ಬಂಧುಗಳನ್ನು ಕರೆದುಕೊಂಡು ಹೋಗಲು ಬಂದವರೆಂದು ಅವರು ತಿಳಿಸಿದ್ದಾರೆ.
ಮ್ಯಾನ್ಮಾರ್‌ನ ಪಶ್ಚಿಮದ ಗಡಿಪ್ರದೇಶವಾದ ರಾಖೈನ್‌ನಲ್ಲಿ ನೆಲೆಸಿದ್ದ ಸಹಸ್ರಾರು ರೋಹಿಂಗ್ಯ ಮುಸ್ಲಿಮರು, ತಮ್ಮ ವಿರುದ್ಧ ಸೇನಾಪಡೆಗಳು ಹಾಗೂ ಪೊಲೀಸರು ನಡೆಸಿದ್ದ ದಮನ ಕಾರ್ಯಾಚರಣೆಯ ಬಳಿಕ ಪ್ರಾಣವುಳಿಸಿಕೊಳ್ಳಲು ನೆರೆಯ ರಾಷ್ಟ್ರವಾದ ಬಾಂಗ್ಲಾಗೆ ಪರಾರಿಯಾಗಿದ್ದರು.
ಸುಮಾರು 1 ಸಾವಿರದಷ್ಟು ರೋಹಿಂಗ್ಯ ಮುಸ್ಲಿಮರು, ತಾವು ಬಿಟ್ಟುಬಂದಿದ್ದ ತಮ್ಮ ಕುಟುಂಬದ ಹಿರಿಯ ಸದಸ್ಯರನ್ನು ಕರೆತರಲು ತಮ್ಮ ಹಳ್ಳಿಗಳಿಗೆ ವಾಪಸಾಗಿದ್ದಾರೆಂದು ಬಾಂಗ್ಲಾದ ಕರಾವಳಿ ಪಟ್ಟಣವಾದ ಟೆಕ್ನಾಫ್‌ನಲ್ಲಿರುವ ರೋಹಿಂಗ್ಯ ಮುಸ್ಲಿಮ್ ನಿರಾಶ್ರಿತ ಶಿಬಿರದ ನಾಯಕ ದುಡು ಮಿಯಾ ತಿಳಿಸಿದ್ದಾರೆ.
ಮ್ಯಾನ್ಮಾರ್‌ನ ಸೇನಾಪಡೆಗಳು ರೋಹಿಂಗ್ಯ ಮುಸ್ಲಿಮರ ವಿರುದ್ಧ ನಡೆಸುತ್ತಿರುವ ದಮನಕಾರ್ಯಾಚರಣೆಯು, ಮಾನವತೆ ವಿರುದ್ಧ ಎಸಗುವ ಘೋರ ಅಪರಾಧವೆಂದು ವಿಶ್ವಸಂಸ್ಥೆಯು ಎಚ್ಚರಿಕೆ ನೀಡಿದ ಬಳಿಕ, ಮ್ಯಾನ್ಮಾರ್ ಸೇನೆಯು ಉತ್ತರ ರಾಖೈನ್ ಪ್ರಾಂತದಲ್ಲಿ ತನ್ನ ಸೇನಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು.